ADVERTISEMENT

ಗಾಳಿಯಿಂದ ನೀರು: ಇಸ್ರೇಲ್‌ನ ವಾಟರ್‌ಜೆಟ್‌ ಕಂಪನಿಯಿಂದ ತಂತ್ರಜ್ಞಾನ ಅಭಿವೃದ್ಧಿ

ಸಚಿವ ಕೆ.ಎಸ್‌.ಈಶ್ವರಪ್ಪ ಸಮ್ಮುಖದಲ್ಲಿ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2021, 20:51 IST
Last Updated 29 ಅಕ್ಟೋಬರ್ 2021, 20:51 IST
   

ಬೆಂಗಳೂರು: ಗಾಳಿಯಲ್ಲಿರುವ ತೇವಾಂಶದಿಂದ ಕುಡಿಯುವ ನೀರು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ಇಸ್ರೇಲ್‌ನ ವಾಟರ್‌ಜೆಟ್‌ ಕಂಪನಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಸಮ್ಮುಖದಲ್ಲಿ ತನ್ನ ವಿನೂತನ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ನೀಡಿತು.

ಗಾಳಿಯಿಂದ ಕುಡಿಯುವ ನೀರು ತಯಾರಿಸುವ ತಂತ್ರಜ್ಞಾನ ವಿಶ್ವದಲ್ಲೇ ಅಪರೂಪದ್ದು. ವಿಶ್ವದಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಇದ್ದು, ಅದನ್ನು ನಿವಾರಿಸುವ ದಿಸೆಯಲ್ಲಿ ತಂತ್ರಜ್ಞಾನ ವರದಾನ ಎಂದು ಪರಿಗಣಿಸಲಾಗಿದೆ. ಮುಂದಿನ ಒಂದು ದಶಕದಲ್ಲಿ ವಿಶ್ವದ ಶೇ 55 ರಷ್ಟು ಜನ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರಿನ ಕೊರತೆ ಎದುರಿಸಲಿದ್ದಾರೆ. ಆ ಕೊರತೆ ನೀಗಿಸುವಲ್ಲಿ ವಿನೂತನ ನೆರವಾಗಲಿದೆ ಎಂದು ಕಂಪನಿ ಪ್ರತಿನಿಧಿಗಳು
ವಿವರಿಸಿದರು.

ಈ ಸಂದರ್ಭದಲ್ಲಿ ಇಸ್ರೇಲ್‌ ದೇಶದ ದಕ್ಷಿಣ ಭಾರತದ ಕಾನ್ಸೂಲ್‌ ಜನರಲ್‌ ಜೋನಾಥನ್‌ ಝಡ್ಕಾ ಅವರೂ ಇದ್ದರು.

ADVERTISEMENT

‌ಅನುದಾನ ಹಂಚಿಕೆ:ಗ್ರಾಮ ಪಂಚಾಯಿತಿಗಳಿಂದ ಮೇಲ್ದರ್ಜೆಗೇರಿಸಲಾದ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿಪಡಿಸಲಾಗಿರುವ ಅನುದಾನವನ್ನು ತಕ್ಷಣವೇ ಹಂಚಿಕೆ ಮಾಡುವಂತೆ ಸಚಿವ ಕೆ.ಎಸ್‌.ಈಶ್ವರಪ್ಪ ಸೂಚನೆ ನೀಡಿದರು.

ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂ.ಟಿ.ಬಿ.ನಾಗರಾಜು ಅವರ ಮನವಿ ಮೇರೆಗೆ ವಿಧಾನಸೌಧದಲ್ಲಿ ಶುಕ್ರವಾರ ಈಶ್ವರಪ್ಪ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿದರು. ಕಳೆದ ಸಾಲಿನಲ್ಲಿ 23 ಗ್ರಾಮ ಪಂಚಾಯಿತಿಗಳನ್ನು 20 ಪಟ್ಟಣ ಪಂಚಾಯಿತಿಗಳು, 2 ಪುರಸಭೆ ಮತ್ತು 1 ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಅವುಗಳಿಗೆ ಅನುದಾನ ಬಿಡುಗಡೆ ಮಾಡದ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.ಮೇಲ್ದರ್ಜೆಗೇರಿಸಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಕೂಡಲೇ ಅನುದಾನ ವರ್ಗಾಯಿಸಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವಂತೆ ಈಶ್ವರಪ್ಪ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.