ADVERTISEMENT

ದಾಹ ನೀಗಿಸಲಿದೆ ‘ನೀರಿನ ಮನೆ’

ಲಾಲ್‌ಬಾಗ್‌ ಉದ್ಯಾನದಲ್ಲಿ ಶುದ್ಧ ನೀರಿನ ಘಟಕಗಳ ಅನುಷ್ಠಾನ

ಮನೋಹರ್ ಎಂ.
Published 17 ಜುಲೈ 2019, 19:46 IST
Last Updated 17 ಜುಲೈ 2019, 19:46 IST
ಲಾಲ್‌ಬಾಗ್‌ ಉದ್ಯಾನದಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕ, ಇಲಾಖೆ ಸಿಬ್ಬಂದಿಗೆ ನೀಡಿರುವ ಬೈಸಿಕಲ್‌
ಲಾಲ್‌ಬಾಗ್‌ ಉದ್ಯಾನದಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕ, ಇಲಾಖೆ ಸಿಬ್ಬಂದಿಗೆ ನೀಡಿರುವ ಬೈಸಿಕಲ್‌   

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನವನ್ನು ‘ಪ್ಲಾಸ್ಟಿಕ್‌ ಮುಕ್ತ’ ಎಂದು ಘೋಷಿಸಿದ ಬಳಿಕ ಕುಡಿಯುವ ನೀರನ್ನು ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಒಯ್ಯುವುದನ್ನು ನಿರ್ಬಂಧಿಸಲಾಗಿತ್ತು. ಇದರಿಂದ ಪ್ರವಾಸಿಗರು ಸಮಸ್ಯೆ ಎದುರಿಸುವುದನ್ನು ಮನಗಂಡ ತೋಟಗಾರಿಕಾ ಇಲಾಖೆ, ಶುದ್ಧೀಕರಿಸಿದ ಕುಡಿಯುವ ನೀರು ಪೂರೈಕೆಗಾಗಿ ಉದ್ಯಾನದಲ್ಲಿ ಅಲ್ಲಲ್ಲಿ ‘ನೀರಿನ ಮನೆ’ಗಳನ್ನು ನಿರ್ಮಿಸುತ್ತಿದೆ.

ಲಾಲ್‌ಬಾಗ್‌ಗೆ ಭೇಟಿ ನೀಡುವ ಪ್ರವಾಸಿಗರು ಪ್ಲಾಸ್ಟಿಕ್‌ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ, ಉದ್ಯಾನದ ಅಂದವನ್ನು ಹಾಳು ಮಾಡುತ್ತಿದ್ದರು. ಇದನ್ನು ತಡೆಯಲು ತೋಟಗಾರಿಕೆ ಇಲಾಖೆ ಎರಡು ವರ್ಷಗಳ ಹಿಂದೆ ಉದ್ಯಾನದಲ್ಲಿ ಪ್ಲಾಸ್ಟಿಕ್‌ ಬಾಟಲಿ ಬಳಕೆ ನಿಷೇಧಿಸಿತ್ತು. ಪರ್ಯಾಯವಾಗಿ ಕ್ಯಾನ್‌ಗಳಲ್ಲಿ ಕುಡಿಯುವ ನೀರು ಪೂರೈಸಲು ವ್ಯವಸ್ಥೆ ಮಾಡಿತ್ತು. ಆದರೆ, ಅದರ ಬಳಕೆಗೆ ಪ್ರವಾಸಿಗರು ಆಸಕ್ತಿ ತೋರಿರಲಿಲ್ಲ.

‘ಪ್ರಜಾವಾಣಿ’ ವತಿಯಿಂದ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ನಡಿಗೆದಾರರು, ಕುಡಿಯುವ ನೀರಿನ ಬಾಟಲಿ ನಿಷೇಧದಿಂದ ಆಗಿರುವ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರು. ಈ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು.

ADVERTISEMENT

ಉದ್ಯಾನದಲ್ಲಿ ಈಗಾಗಲೇ 10 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ. ಈ ಘಟಕಗಳ ರಕ್ಷಣೆಗಾಗಿ ಪುಟ್ಟ ಮನೆಗಳನ್ನೂ ನಿರ್ಮಿಸಲಾಗಿದೆ. ಅವುಗಳ ವಿನ್ಯಾಸವೂ ಆಕರ್ಷಕವಾಗಿದೆ.

‘ಪ್ರವಾಸಿಗರ ದಾಹ ನೀಗಿಸಲು ಉದ್ಯಾನದಲ್ಲಿ ಅಲ್ಲಲ್ಲಿ ಕ್ಯಾನ್‌ಗಳಲ್ಲಿ ನೀರು ಇಡುತ್ತಿದ್ದೆವು. ಬಿಸಿಲು, ಮಳೆಯಿಂದ ಕ್ಯಾನ್‌ಗಳಿಗೆ ರಕ್ಷಣೆ ಒದಗಿಸಲು ಅಲ್ಲಲ್ಲಿ ಶೆಲ್ಟರ್‌ ಅಳವಡಿಸಿದ್ದೆವು. ಕೆಲವು ಕಿಡಿಗೇಡಿಗಳುಸುಲಭವಾಗಿ ಕ್ಯಾನ್‌ ಒಳಗೆ ಏನನ್ನಾದರೂ ಬೆರೆಸುವ ಅಪಾಯವಿತ್ತು. ಈ ಬಗ್ಗೆ ಪ್ರವಾಸಿಗರೂ ಆತಂಕ ವ್ಯಕ್ತಪಡಿಸಿದ್ದರು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸುತ್ತಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾರಾಂತ್ಯದಲ್ಲಿ ಮಕ್ಕಳೊಂದಿಗೆ ಉದ್ಯಾನಕ್ಕೆ ಬರುತ್ತೇವೆ. ಮನೆಯಿಂದ ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ನೀರು ತಂದರೂ ಅದನ್ನು ಉದ್ಯಾನದ ಒಳಗೆ ಬಿಡುತ್ತಿರಲಿಲ್ಲ. ಕ್ಯಾನ್‌ಗಳಲ್ಲಿ ಇಡುತ್ತಿದ್ದ ನೀರಿನ ಶುದ್ಧತೆಯ ಬಗ್ಗೆ ಅನುಮಾನವಿತ್ತು.ಈಗ ಅಳವಡಿಸಿರುವ ನೀರಿನ ಘಟಕಗಳು ಗುಣಮಟ್ಟದಿಂದ ಕೂಡಿವೆ. ಇನ್ನು ಮುಂದೆ ಕುಡಿಯುವ ನೀರಿನ ಸಮಸ್ಯೆ ಇಲ್ಲ’ ಎಂದು ಜಯನಗರ ನಿವಾಸಿ ಪಾರ್ವತಿ ಸಂತಸ ವ್ಯಕ್ತಪಡಿಸಿದರು.

ವಾಹನ ಬಳಕೆ ಸಂಪೂರ್ಣ ನಿಷೇಧ

ಲಾಲ್‌ಬಾಗ್‌ನಲ್ಲಿ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇಲಾಖೆ ಅಧಿಕಾರಿಗಳ ವಾಹನಗಳನ್ನು ನಿಲುಗಡೆ ಮಾಡಲು ಪ್ರತ್ಯೇಕ ಸ್ಥಳ ನಿಗದಿ ಮಾಡಲಾಗಿದೆ. ಅಧಿಕಾರಿಗಳು ವಿದ್ಯುತ್‌ ಚಾಲಿತ ‘ಬಗ್ಗಿ’ ವಾಹನಗಳನ್ನು ಬಳಸಲು ಅವಕಾಶ ನೀಡಲಾಗಿದೆ.

‘ಉದ್ಯಾನದಲ್ಲಿ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿಗೆ 35 ಬೈಸಿಕಲ್‌ಗಳನ್ನು ವಿತರಿಸಲಾಗಿದೆ. ತೀರಾ ತುರ್ತು ಸಂದರ್ಭದಲ್ಲಿ ಮಾತ್ರ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು ಹಾಗೂಉಪನಿರ್ದೇಶಕರು ವಾಹನ ಬಳಸಬಹುದು’ ಎಂದುಚಂದ್ರಶೇಖರ್‌ ತಿಳಿಸಿದರು.

‘ಪ್ರಜಾವಾಣಿ’ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ‘ಲಾಲ್‌ಬಾಗ್‌ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧ ಮಾಡಬೇಕು’ ಎಂದು ಒತ್ತಾಯಿಸಿದ್ದರು.

**

ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ ತೋಟಗಾರಿಕೆ ಇಲಾಖೆ ಕಾರ್ಯ ಶ್ಲಾಘನೀಯ. ಇದರಿಂದ ಶಾಶ್ವತ ಪರಿಹಾರ ಸಿಕ್ಕಂತಾಗಿದೆ
- ಜಿ.ಕನಕಲಕ್ಷ್ಮಿ, ಬೆಂಗಳೂರು ನಿವಾಸಿ

**

ಶುದ್ಧ ನೀರಿನ ಘಟಕಗಳ ಅನುಷ್ಠಾನದಿಂದ ನಿರ್ವಹಣಾ ವೆಚ್ಚ ಕಡಿಮೆ ಆಗಲಿದೆ. ಸಿಬ್ಬಂದಿಗೂ ಕ್ಯಾನ್‌ಗಳಿಗೆ ಪದೇ ಪದೇ ನೀರು ತುಂಬಿಸುವ ಕೆಲಸ ತಪ್ಪಿದೆ.
-ಚಂದ್ರಶೇಖರ್‌, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.