ADVERTISEMENT

ಜ.17ರ ಲಾರಿ ಮುಷ್ಕರಕ್ಕೆ ಬೆಂಬಲವಿಲ್ಲ: ಷಣ್ಮುಗಪ್ಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:35 IST
Last Updated 12 ಜನವರಿ 2024, 15:35 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‘ತಪ್ಪು ಮಾಹಿತಿ ಮತ್ತು ದುರುದ್ದೇಶ ಪೂರಿತ ಪ್ರಚಾರದ ಮೂಲಕ ಲಾರಿ ಚಾಲಕರನ್ನು ಪ್ರಚೋದಿಸಿ, ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಮುಷ್ಕರಕ್ಕೆ ನಾವು ಬೆಂಬಲ ನೀಡುವುದಿಲ್ಲ’ ಎಂದು ಫೆಡರೇಷನ್‌ ಆಫ್ ಕರ್ನಾಟಕ ಸ್ಟೇಟ್‌ ಲಾರಿ ಓನರ್ಸ್ ಆ್ಯಂಡ್ ಏಜೆಂಟ್ಸ್ ಅಸೋಸಿಯೇಷನ್ ತಿಳಿಸಿದೆ. 

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ‘ದಕ್ಷಿಣ ಭಾರತದ ಕೆಲ ಲಾರಿ ಮಾಲೀಕರ ಸಂಘ ಜ.17ರಂದು ಕರೆ ನೀಡಿರುವ ಲಾರಿ ಮುಷ್ಕರ ಅವೈಜ್ಞಾನಿಕವಾಗಿದೆ. ಚಾಲಕರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ‘ಅಪಘಾತ ನಡೆಸಿ ಪರಾರಿ’ಯಾದ (ಹಿಟ್‌ ಆ್ಯಂಡ್‌ ರನ್‌) ಪ್ರಕರಣಗಳಿಗೆ ಸಂಬಂಧಿಸಿದ ರಸ್ತೆ ಸಂಚಾರ ಕಾನೂನು ತಿದ್ದುಪಡಿಯನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಲಿಖಿತ ಭರವಸೆ ನೀಡಿದೆ. ಆದ್ದರಿಂದ ಚಾಲಕರು ಆತಂಕಕ್ಕೆ ಒಳಗಾಗಬೇಕಿಲ್ಲ’ ಎಂದು ಹೇಳಿದರು. 

ADVERTISEMENT

‘ತಿದ್ದುಪಡಿ ಮಾಡಲಾದ ಕಾನೂನು ಜಾರಿಯಿಂದ ಆಗುವ ಪರಿಣಾಮಗಳ ಬಗ್ಗೆ ಆಲ್‌ ಇಂಡಿಯಾ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ತಂಡವು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಸಿದೆ. ಗೃಹ ಸಚಿವಾಲಯದ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಸಭೆಯನ್ನೂ ನಡೆಸಲಾಗಿದ್ದು, ನಿಬಂಧನೆಗಳನ್ನು ವಿಧಿಸುವುದಿಲ್ಲವೆಂದು ಅವರು ಲಿಖಿತ ಭರವಸೆ ನೀಡಿದ್ದಾರೆ. ಆದರೆ, ಈಗ ಪಟ್ಟಭದ್ರ ಹಿತಾಸಕ್ತಿಗಳು ಆಧಾರ ರಹಿತ ವದಂತಿಗಳನ್ನು ಹರಡಿ, ಚಾಲಕರ ದಿಕ್ಕನ್ನು ತಪ್ಪಿಸಲು ಮುಂದಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಅಪಘಾತ ನಡೆಸಿ ಪರಾರಿಯಾಗುವ ಪ್ರಕರಣಗಳಲ್ಲಿ 10 ವರ್ಷ ಜೈಲು ಹಾಗೂ ₹ 7 ಲಕ್ಷ ದಂಡ ವಿಧಿಸುವ ನಿಬಂಧನೆಯನ್ನು ಕೇಂದ್ರ ಸರ್ಕಾರ ಕಾರ್ಯಗತಗೊಳಿಸುತ್ತಿಲ್ಲ. ಗೃಹ ಸಚಿವಾಲಯದ ಕಾರ್ಯದರ್ಶಿ ಅವರು ಈ ಬಗ್ಗೆ ಮತ್ತೊಮ್ಮೆ ಜ.8ರಂದು ಎಐಎಂಟಿಸಿ ಅಧ್ಯಕ್ಷ ಅಜಯ್‌ ಭಲ್ಲಾ ಅವರಿಗೆ ಪತ್ರ ಬರೆದಿದ್ದಾರೆ. ಆದ್ದರಿಂದ ಮುಷ್ಕರಕ್ಕೆ ಬೆಂಬಲ ನೀಡಬಾರದು’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.