ಬೆಂಗಳೂರು: ‘ಬಡ, ಆದಿವಾಸಿಗಳ, ರೈತರ ಪರ ಧ್ವನಿಯೆತ್ತುವವರನ್ನು ನಗರದ ನಕ್ಸಲರು ಎಂದು ಕರೆಯುವುದಾದರೆ ನಾವೂ ನಗರದ ನಕ್ಸಲರೇ’ ಎಂದು ಸ್ವಾಮಿ ಅಗ್ನಿವೇಶ್ ಗುಡುಗಿದರು.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದು ಒಂದು ವರ್ಷ ಪೂರ್ಣಗೊಂಡ ಪ್ರಯುಕ್ತ ಗೌರಿ ಲಂಕೇಶ್ ಟ್ರಸ್ಟ್ ಮತ್ತು ಗೌರಿ ಬಳಗ ಬುಧವಾರ ನಗರದಲ್ಲಿ ಹಮ್ಮಿಕೊಂಡ ಗೌರಿ ದಿನ ಕಾರ್ಯಕ್ರಮದ ಅಂಗವಾಗಿ ರಾಜಭವನ ಚಲೋ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮಾನವ ಪರಿವಾರದವರು ಒಂದೇ. ನಮ್ಮ ಮಾತಿಗೆ ನೀವು ಗುಂಡಿನ ಮೂಲಕ ಪ್ರತಿಕ್ರಿಯಿಸುತ್ತೀರಾದರೆ ನಾವು ಮತದಾನದ ಮೂಲಕ (ಬ್ಯಾಲೆಟ್) ಉತ್ತರಿಸುತ್ತೇವೆ’ ಎಂದರು.
‘ಸನಾತನ ಸಂಸ್ಥೆ ಸಾಮಾನ್ಯ ಧರ್ಮ ಪ್ರಚಾರಕ ಸಂಸ್ಥೆ ಅಲ್ಲ. ಅದು ಭಯೋತ್ಪಾದನಾ ಸಂಸ್ಥೆ. ಅದರ ಮೇಲೆ ಸರ್ಕಾರ ನಿಗಾ ಇಡಬೇಕು ಎಂದು ಆಶಿಸಿದ ಅವರು, ವಿಚಾರ ಸ್ವತಂತ್ರತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವವರನ್ನು ನಿಯಂತ್ರಿಸಬೇಕು’ ಎಂದರು.
ಮಾತಿನುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಸ್ವಾಮೀಜಿ, ‘ಮೋದಿ ಅವರೊಬ್ಬ ಸಂಘ ಪ್ರಚಾರಕ. ಅವರನ್ನು ಗುಜರಾತ್‌ನ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಅವರು ಗುಜರಾತನ್ನು ತಮ್ಮ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡರು. ಮುಂದಿನ 15 ವರ್ಷಗಳ ಕಾಲ ಅವರು ಹೇಳಿದ್ದೇ ನಡೆಯಿತು. 4 ವರ್ಷಗಳಿಂದ ವಿಶ್ವವಿದ್ಯಾಲಯಗಳಿಂದ ಹಿಡಿದು ಎಲ್ಲ ಆಯಕಟ್ಟಿನ ಸ್ಥಳಗಳಲ್ಲಿ ಅವರ ಕಡೆಯವರೇ ಇದ್ದಾರೆ’ ಎಂದರು.
‘ಆರ್‌ಎಸ್‌ಎಸ್ ಎಂದರೆ ಬಹುಮುಖಿ ರಾಕ್ಷಸ. ಬೇರೆ ಬೇರೆ ಹೆಸರುಗಳಲ್ಲಿ ಅದರ ಅಸ್ತಿತ್ವ ಇದೆ. ಅದರ ನಾಯಕ ಹಿಟ್ಲರ್. ಈ ಸಂಘಟನೆಯ ನಾಯಕರೆಲ್ಲಾ ಅದೇ ತತ್ವವನ್ನು ಪಾಲಿಸುವವರಾಗಿದ್ದಾರೆ. ಆರ್‌ಎಸ್‌ಎಸ್‌ನದ್ದು ರಾಜಕೀಯ ಹಿಂದುತ್ವ. ಹಿಂದೂಗಳ ಏಕತೆ ಬಗ್ಗೆ ಮಾತನಾಡುವ ಇವರಿಗೆ ದಾಬೋಲ್ಕರ್, ಗೋವಿಂದರಾವ್ ಪಾನ್ಸರೆ, ಪ್ರೊ.ಎಂ.ಎಂ.ಕಲಬುರ್ಗಿ ಅವರು ಹಿಂದೂಗಳಾಗಿ ಕಾಣಲಿಲ್ಲವೇ’ ಎಂದು ಪ್ರಶ್ನಿಸಿದರು.
‘ಆರ್‌ಎಸ್‌ಎಸ್‌ನ ಬಹುಮುಖಿ ಸಂಸ್ಥೆಗಳಲ್ಲಿ ಸನಾತನ ಸಂಸ್ಥೆಯೂ ಒಂದು. ಅದು ನೈಜ ಹಿಂದೂಗಳ ವಿರೋಧಿ. ಯಾರು ವೇದ, ಉಪನಿಷತ್ತುಗಳನ್ನು ಪಾಲಿಸುತ್ತಾರೋ ಅಂಥವರನ್ನು ಸಹಿಸುವುದಿಲ್ಲ’ ಎಂದರು.
ನಮ್ಮದು ಶಸ್ತ್ರಾಸ್ತ್ರ ಪರಂಪರೆ ಅಲ್ಲ. ಅದರಿಂದ ದೂರ ಇದ್ದು ಸೈದ್ಧಾಂತಿಕವಾಗಿ ಹೋರಾಡುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.