ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ: ಬೆಂಗಳೂರು ಸ್ತಬ್ಧ

ಬಣಗುಡುತ್ತಿದ್ದ ರಸ್ತೆಗಳು: ಅನಗತ್ಯ ರಸ್ತೆಗೆ ಇಳಿದವರಿಗೆ ಲಾಠಿ ರುಚಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 20:48 IST
Last Updated 24 ಏಪ್ರಿಲ್ 2021, 20:48 IST
ಸದಾ ಜನಜಂಗುಳಿಯಿಂದ ಕೂಡಿರುವ ಅವೆನ್ಯೂ ರಸ್ತೆ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಶನಿವಾರ ಬಿಕೋ ಎನ್ನುತ್ತಿತ್ತು–ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್
ಸದಾ ಜನಜಂಗುಳಿಯಿಂದ ಕೂಡಿರುವ ಅವೆನ್ಯೂ ರಸ್ತೆ ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿ ಶನಿವಾರ ಬಿಕೋ ಎನ್ನುತ್ತಿತ್ತು–ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್   

ಬೆಂಗಳೂರು:‌ ಉಲ್ಬಣಗೊಂಡಿರುವ ಕೋವಿಡ್‌ ನಿಯಂತ್ರಣಕ್ಕೆ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದ್ದರಿಂದ ರಾಜಧಾನಿ ಶನಿವಾರ ಸಂಪೂರ್ಣ ಸ್ತಬ್ಧಗೊಂಡಿತ್ತು.

ನಗರದಲ್ಲಿ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಬಾರ್ ಮತ್ತು ರಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಘೋಷಿತ ಬಂದ್‌ ಘೋಷಣೆಯಾದಂತಿತ್ತು. ಬೆಳಿಗ್ಗೆ 6ರಿಂದ 10 ಗಂಟೆ ತನಕ ದಿನಸಿ, ತರಕಾರಿ, ಹಣ್ಣು, ಹಾಲು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿತ್ತು. ಆ ನಂತರ ಪಾರ್ಸೆಲ್‌ಗೆ ಸೇವೆಗೂ ಅವಕಾಶ ನೀಡಲಾಗಿತ್ತು.

ದಿನಸಿ ಮಳಿಗೆಗಳು, ಬಿಗ್ ಬಜಾರ್, ಮೆಗಾಮಾರ್ಟ್, ಡಿಮಾರ್ಟ್ ಸೇರಿ ಸಣ್ಣಪುಟ್ಟ ಮಾರ್ಟ್‌ಗಳಿಗೆ ಬೆಳಿಗ್ಗೆಯಿಂದಲೇ ಜನ ಮುಗಿಬಿದ್ದಿದ್ದರು. ರಸ್ತೆ ಬದಿಯ ತರಕಾರಿ ಮಳಿಗೆ, ಮಾಂಸದ ಅಂಗಡಿಗಳ ಬಳಿಯೂ ಜನ ಜಮಾಯಿಸಿದ್ದರು.

ADVERTISEMENT

10 ಗಂಟೆ ನಂತರ ಪೊಲೀಸರು ಬಿಗಿ ಕ್ರಮಕ್ಕೆ ಮುಂದಾದರು. ರಸ್ತೆಗಿಳಿದ ಬೈಕ್ ಮತ್ತು ಕಾರುಗಳನ್ನು ತಡೆದು ಕಾರಣ ಕೇಳಿದರು. ಕುಂಟುನೆಪ ಹೇಳಿಕೊಂಡು ರಸ್ತೆಗೆ ಬಂದವರಿಗೆ ಲಾಠಿ ರುಚಿಯನ್ನೂ ತೋರಿಸಿದರು.

ರಸ್ತೆಯಲ್ಲಿ ಅಡ್ಡಲಾಗಿ ಪೊಲೀಸರು ಕಾಣಿಸುತ್ತಿದ್ದಂತೆ ಬೈಕ್ ತಿರುಗಿಸಿಕೊಂಡು ಹೋಗುತ್ತಿದ್ದರು. ಆಸ್ಪತ್ರೆ, ಔಷಧ ಮಳಿಗೆಗಳಿಗೆ ತೆರಳುವವರು ಪೊಲೀಸರಿಗೆ ಮನವರಿಕೆ ಮಾಡಿಸಿ ಮುಂದೆ ಸಾಗಿದರೆ, ಅನವಶ್ಯಕವಾಗಿ ರಸ್ತೆಗೆ ಬಂದವರ ಬೈಕ್‌ಗಳನ್ನೂ ಪೊಲೀಸರು ವಶಕ್ಕೆ ಪಡೆದರು. ಬೈಕ್‌ಗಳನ್ನು ಬಿಡಿಸಿಕೊಳ್ಳಲು ಪೊಲೀಸ್ ಠಾಣೆಗಳ ಮುಂದೆ ಜನ ಜಮಾಯಿಸಿದ್ದರು.

ಪೊಲೀಸರು ಅಡ್ಡಗಟ್ಟಿ ಲಾಠಿ ಏಟು ನೀಡುತ್ತಿರುವ ಮಾಹಿತಿ ತಿಳಿದ ಬಳಿಕ ಜನಸಂಚಾರ ಕಡಿಮೆಯಾಯಿತು. ಪೊಲೀಸರ ಬಿಗಿ ಕ್ರಮದಿಂದಾಗಿ ನಗರದ ರಸ್ತೆಗಳೆಲ್ಲವೂ ಬಣಗುಡುತ್ತಿದ್ದವು. ಮೇಲ್ಸೇತುವೆಗಳ ಮೇಲೆ ಯಾವುದೇ ವಾಹನಗಳ ಸಂಚಾರ ಇರಲಿಲ್ಲ. ವರ್ತಕರು ಅಂಗಡಿ–ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಬಂದ್ ರೀತಿಯ ವಾತಾವರಣ ನಿರ್ಮಾಣವಾಗಿತ್ತು.

ನಗರದ ಹೃದಯ ಭಾಗವಾಗಿರುವ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬೆರಳೆಣಿಕೆಯಷ್ಟು ಬಸ್‌ಗಳು ಸಂಚರಿಸಿದವು. ಅಗತ್ಯ ಸೇವೆಗಳಿಗಷ್ಟೇ ಬಿಎಂಟಿಸಿ ಬಸ್‌ಗಳನ್ನು ಕಾಯ್ದಿರಿಸಲಾಗಿತ್ತು. ನಿಗದಿತ ಮಾರ್ಗದಲ್ಲೇ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆ ಬಸ್‌ಗಳೂ ಪ್ರಯಾಣಿಕರಲ್ಲಿದೆ ಖಾಲಿ ಸಂಚರಿಸಿದವು.

ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರಿಗಾಗಿ ಗಂಟೆಗಟ್ಟಲೆ ಬಸ್‌ಗಳು ಕಾದು ನಿಂತಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಪ್ರಯಾಣಿಕರು ವಿರಳವಾಗಿದ್ದ ಕಾರಣ ಬಸ್‌ಗಳ ಸಂಖ್ಯೆಯೂ ಕಡಿಮೆ ಇತ್ತು. ಪ್ರಯಾಣಿಕರ ಲಭ್ಯತೆ ಆಧರಿಸಿ ಬಸ್‌ಗಳ ಕಾರ್ಯಾಚರಣೆಯನ್ನು ಕೆಎಸ್‌ಆರ್‌ಟಿಸಿ ನಿರ್ವಹಿಸಿತು.

ಕರ್ಫ್ಯೂ; ಭದ್ರತೆ ಪರಿಶೀಲಿಸಿದ ಗೃಹ ಸಚಿವ
ನಗರದ ಹಲವೆಡೆ ಶನಿವಾರ ಸಂಚರಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕರ್ಫ್ಯೂ ಭದ್ರತೆ ಪರಿಶೀಲಿಸಿದರು. ಜನರನ್ನು ಮಾತನಾಡಿಸಿ ನಿಯಮ ಪಾಲಿಸುವಂತೆ ಕೋರಿದರು.

ತಮ್ಮ ನಿವಾಸದಿಂದ ಹೊರಟ ಸಚಿವ, ಬಸವೇಶ್ವರ ವೃತ್ತ ಹಾಗೂ ಕೆ.ಆರ್. ವೃತ್ತದ ಮೂಲಕ ಕೆ.ಆರ್. ಮಾರುಕಟ್ಟೆಗೆ ತೆರಳಿದರು. ಅಲ್ಲಿಯ ಭದ್ರತಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು. ಮಾರುಕಟ್ಟೆಯಲ್ಲಿ ಸಂಚರಿಸುತ್ತಿದ್ದ ಕೆಲವರನ್ನು ಮಾತನಾಡಿಸಿದರು. ಮಾಸ್ಕ್‌ ಹಾಕಿಕೊಳ್ಳದವರನ್ನು ತರಾಟೆಗೆ ತೆಗೆದುಕೊಂಡು, ಮಾಸ್ಕ್‌ ಧರಿಸುವಂತೆ ಕಿವಿಮಾತು ಹೇಳಿದರು.

ಚಾಮರಾಜಪೇಟೆ, ಶಿವಾಜಿನಗರ, ಕಮರ್ಷಿಯಲ್‌ ಸ್ಟ್ರೀಟ್‌ ಹಾಗೂ ಸುತ್ತಮುತ್ತ ಪ್ರದೇಶಗಳಿಗೂ ಸಚಿವ ಬೊಮ್ಮಾಯಿ ಭೇಟಿ ನೀಡಿದರು. ಆಡುಗೋಡಿಯ ಮಂಗಳ ಕಲ್ಯಾಣ ಮಂಟಪದಲ್ಲಿ ಕೊರೊನಾ ಸೋಂಕಿತ ಪೊಲೀಸರಿಗೆ ಚಿಕಿತ್ಸೆ ನೀಡಲು ಮಾಡಿರುವ ವ್ಯವಸ್ಥೆಯನ್ನೂ ಪರಿಶೀಲಿಸಿದರು.

ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್, ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಇದ್ದರು.

ಕರ್ಫ್ಯೂ; 1,149 ವಾಹನಗಳ ಜಪ್ತಿ
ನಗರದಲ್ಲಿ ಶುಕ್ರವಾರ ರಾತ್ರಿ ಕರ್ಫ್ಯೂ ವೇಳೆ ಅನಗತ್ಯವಾಗಿ ಓಡಾಡಿದ್ದ 1,149 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಶುಕ್ರವಾರ ರಾತ್ರಿಯಿಂದಲೇ ನಗರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಎಲ್ಲ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮೇಲ್ಸೇತುವೆಗಳನ್ನೂ ಬಂದ್ ಮಾಡಲಾಗಿದೆ. ಅಷ್ಟಾದರೂ ಕೆಲವರು, ಅನಗತ್ಯವಾಗಿ ರಸ್ತೆಗೆ ಬರುತ್ತಿದ್ದಾರೆ. ಶುಕ್ರವಾರ ರಾತ್ರಿ ಅಂಥವರ ವಾಹನಗಳನ್ನು ತಡೆದು ಪೊಲೀಸರು ದಂಡ ವಿಧಿಸಿದ್ದಾರೆ. 1,041 ದ್ವಿಚಕ್ರ ವಾಹನ, 45 ಆಟೊ ಹಾಗೂ 65 ಕಾರುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇಂದ್ರ ವಿಭಾಗದಲ್ಲಿ 62, ಪಶ್ಚಿಮ ವಿಭಾಗದಲ್ಲಿ 336, ಉತ್ತರ ವಿಭಾಗದಲ್ಲಿ 192, ದಕ್ಷಿಣ ವಿಭಾಗದಲ್ಲಿ 40, ಪೂರ್ವ ವಿಭಾಗದಲ್ಲಿ 118, ಆಗ್ನೇಯ ವಿಭಾಗದಲ್ಲಿ 209, ಈಶಾನ್ಯ ವಿಭಾಗದಲ್ಲಿ 129 ಹಾಗೂ ವೈಟ್‌ಫೀಲ್ಡ್ ವಿಭಾಗದಲ್ಲಿ 63 ವಾಹನಗಳು ಜಪ್ತಿ ಆಗಿವೆ.

‘ಶೇ 50ರಷ್ಟು ಹಾಸಿಗೆ ಗುರುತಿಸಲು ತಂಡ’
‘ನಗರದ ಖಾಸಗಿ ಆಸ್ಪತ್ರೆಗಳಲ್ಲಿನ ಒಟ್ಟು ಹಾಸಿಗೆಗಳಲ್ಲಿ ಶೇ 50ರಷ್ಟನ್ನು ಕೋವಿಡ್‌ ಚಿಕಿತ್ಸೆಗೆ ಕಾಯ್ದಿರಿಸಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಇಂತಹ ಹಾಸಿಗೆಗಳನ್ನು ಗುರುತಿಸಲು ಡಿಸಿಪಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ’ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ ತಂಡಗಳು, ಮಾಹಿತಿ ಕಲೆಹಾಕಿ ಸರ್ಕಾರಕ್ಕೆ ವರದಿ ನೀಡಲಿದೆ. ಅಂಥ ಹಾಸಿಗೆಗಳನ್ನು ಸರ್ಕಾರ ಸುಪರ್ದಿಗೆ ಪಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.