ADVERTISEMENT

ರಾಜ್ಯದಲ್ಲಿ ಮುಂದಿನ ಒಂದು ವಾರವೂ ಗುಡುಗು ಸಹಿತ ಮಳೆ; 19 ಜಿಲ್ಲೆಗಳಿಗೆ ಅಲರ್ಟ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 15:36 IST
Last Updated 26 ಏಪ್ರಿಲ್ 2025, 15:36 IST
   

ಬೆಂಗಳೂರು: ರಾಜ್ಯದ ವಿವಿಧೆಡೆ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಭಾನುವಾರ 19 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ. 

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆ ಮುಂದುವರಿಯುವ ಸಂಭವವಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ ಹಾಗೂ ಗದಗ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ (ಗಂಟೆಗೆ 50ರಿಂದ 60 ಕಿ.ಮೀ. ವೇಗ) ಮಳೆಯಾಗುವ ಸಾಧ್ಯತೆಯಿದೆ. ಇಲ್ಲಿ ಆಲಿಕಲ್ಲು ಬೀಳುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. 

ದಕ್ಷಿಣ ಒಳನಾಡಿನ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ವಿಜಯನಗರ, ದಾವಣಗೆರೆ, ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ಬಿರುಗಾಳಿಯೊಂದಿಗೆ (ಗಂಟೆಗೆ 40ರಿಂದ 50 ಕಿ.ಮೀ. ವೇಗ) ಸಾಧಾರಣ ಮಳೆಯಾಗುವ ಸಂಭವವಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. 

ADVERTISEMENT

ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳ ಕೆಲವೆಡೆ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯಿದ್ದು, ಇದೇ 30ರಂದು 26 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಮೇ ಮೊದಲ ವಾರದಲ್ಲಿ ಮಳೆ ಹೆಚ್ಚಳವಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.  

ಹೆಚ್ಚಿದ ಬಿಸಿಲ ಧಗೆ

ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಬಿಸಿಲು–ಮಳೆಯಿಂದಾಗಿ ಧಗೆ ಹೆಚ್ಚಾಗಿದೆ. ಆಗಾಗ, ಬಿಸಿ ಗಾಳಿ ಕೂಡ ಕಾಣಿಸಿಕೊಳ್ಳುತ್ತಿದೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ (41.5 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ ಐದು ದಿನಗಳು ಗರಿಷ್ಠ ತಾಪಮಾನದಲ್ಲಿ
ಬದಲಾವಣೆಯಿಲ್ಲ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಉತ್ತರ ಒಳನಾಡಿನಲ್ಲಿ ಎರಡು ದಿನಗಳ ಬಳಿಕ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಂಭವವಿದೆ ಎಂದು ತಿಳಿಸಿದೆ. 

ಸಿಡಿಲು ಬಡಿದು ಮಹಿಳೆ, ಜಾನುವಾರು ಸಾವು

ಹುಬ್ಬಳ್ಳಿ/ಮಂಗಳೂರು/ಮಡಿಕೇರಿ: ಬಾಗಲಕೋಟೆ ತಾಲ್ಲೂಕಿನ ಬೊಡನಾಯಕನದಿನ್ನಿಯಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ಭಾರತಿ (41) ಎಂಬುವರು ಮೃತಪಟ್ಟಿ
ದ್ದಾರೆ. ಹೊಲದ ಕೆಲಸ ಮುಗಿಸಿ, ಮರಳುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಬಾಗಲಕೋಟೆ ನಗರ ಸೇರಿ ತಾಲ್ಲೂಕಿನ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆಯಾಯಿತು.

ಗದಗ ಜಿಲ್ಲೆಯ ಗಜೇಂದ್ರಗಡ ಸಮೀಪದ ಇಟಗಿ ಗ್ರಾಮದ ಹೊಲದಲ್ಲಿ ಶುಕ್ರವಾರ ರಾತ್ರಿ ಸಿಡಿಲು ಬಡಿದು 8 ಆಡು ಮತ್ತು 4 ಕುರಿಗಳು ಮೃತಪಟ್ಟಿವೆ. 6 ಕುರಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಮಳೆಯಾಗಿದೆ. ಕಂಪ್ಲಿ ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಕೊಯ್ಲಿಗೆ ಸಿದ್ದವಾಗಿದ್ದ ಹಿಂಗಾರು ಭತ್ತದ ಕಾಳು ಮಣ್ಣು ಪಾಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶ ಗಳಲ್ಲಿ ಶನಿವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಭಾರಿ ಮಳೆಯಾಗಿದೆ. ಪುತ್ತೂರು, ಕಡಬ ತಾಲ್ಲೂಕಿನ ಉಪ್ಪಿನಂಗಡಿ, ಕೊಯಿಲ, ಆಲಂಕಾರು, ನೆಲ್ಯಾಡಿ, ಸುಳ್ಯ ತಾಲ್ಲೂಕಿನ ಬಳ್ಪ, ಬೆಳ್ತಂಗಡಿ ತಾಲ್ಲೂಕಿನ ಕಡಿರುದ್ಯಾವರ, ಮಡಂತ್ಯಾರ್‌, ನೆರಿಯ, ಕಕ್ಕಿಂಜೆ, ಬಂದಾರು ಪರಿಸರದಲ್ಲಿ ಬಿರುಸಿನ ಮಳೆ ಸುರಿಯಿತು.

ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಬಿರುಸಿನ ಮಳೆ ಸುರಿಯಿತು. ಸುಮಾರು 45 ನಿಮಿಷಗಳ ಕಾಲ ಮಳೆಯಾಯಿತು. ಸಿದ್ದಾಪುರದಲ್ಲಿ ಹಗುರ
ಮಳೆ ಸುರಿದಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರು ಹರ್ಷಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.