ADVERTISEMENT

ತಾಪಮಾನ ಕುಸಿತ: ಬೆಂಗಳೂರಲ್ಲಿ ಚಳಿ ವಾತಾವರಣ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 16:03 IST
Last Updated 15 ನವೆಂಬರ್ 2025, 16:03 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದಲ್ಲಿ ಕಳೆದೊಂದು ವಾರದಿಂದ ತಾಪಮಾನ ಕಡಿಮೆಯಾಗಿದ್ದು, ವಾತಾವರಣದಲ್ಲಿ ಚಳಿ ಕಾಣಿಸಿಕೊಳ್ಳುತ್ತಿದೆ.

ಮೋಡ ಕವಿದ ವಾತಾವರಣ, ತೇವಾಂಶಯುಕ್ತ ಗಾಳಿಯಿಂದಾಗಿ ವಾತಾವರಣದಲ್ಲಿ ಚಳಿ ಹೆಚ್ಚುತ್ತಿದೆ. ನಗರದ ಮೂರು ಕಡೆ ತಾಪಮಾನ ಕೇಂದ್ರಗಳಿವೆ. ಎಚ್‌ಎಎಲ್‌, ಬೆಂಗಳೂರು ನಗರ ಪ್ರದೇಶ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೀಕ್ಷಣಾಲಯವಿದೆ.

ADVERTISEMENT

ಹವಾಮಾನ ಇಲಾಖೆಯ ಪ್ರಕಾರ, ನಗರದಲ್ಲಿ ಕಳೆದ ವಾರ ಸರಾಸರಿ 28 ಡಿಗ್ರಿ ಸೆಲ್ಸಿಯಸ್‌ ಇದ್ದ ಗರಿಷ್ಠ ಉಷ್ಣಾಂಶ, ಈ ವಾರ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತವಾಗಿ 26 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ನಿಂದ 17 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.   

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ತಾಪಮಾನ ಇನ್ನಷ್ಟು ಕುಸಿತವಾಗಿದ್ದು, ಶನಿವಾರ ಕನಿಷ್ಠ ತಾಪಮಾನವು 16.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಅಲ್ಲಿ ಗರಿಷ್ಠ ಉಷ್ಣಾಂಶವು 27 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. 

ಮುಂದಿನ ಒಂದು ವಾರ ಕೂಡ ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಮುಂಜಾನೆ ಮಂಜು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ವರದಿಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. 

‘ನಗರದಲ್ಲಿ ಡಿಸೆಂಬರ್ ತಿಂಗಳಲ್ಲಿ ಚಳಿಯ ತೀವ್ರತೆ ಹೆಚ್ಚಲಿದ್ದು, ಕನಿಷ್ಠ ಉಷ್ಣಾಂಶ 16ರಿಂದ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ. ಮಾರ್ಚ್ ಮೊದಲ ವಾರದವರೆಗೂ ಚಳಿ ಇರುವ ಸಂಭವವಿದೆ’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.