ADVERTISEMENT

‘ಅರ್ಚಕರು ಸೇರಿ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವು‘

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಭರವಸೆ * ಮಹಾಸಭೆಯ ವೆಬ್‌ಸೈಟ್ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 16:42 IST
Last Updated 26 ಜನವರಿ 2022, 16:42 IST
ಅಶೋಕ್ ಹಾರನಹಳ್ಳಿ
ಅಶೋಕ್ ಹಾರನಹಳ್ಳಿ   

ಬೆಂಗಳೂರು: ‘ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣ ಸಮುದಾಯದ ಅರ್ಚಕರು ಹಾಗೂ ಅಡುಗೆ ಕೆಲಸದವರ ಅಭ್ಯುದಯಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು’ ಎಂದುಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಭರವಸೆ ನೀಡಿದರು.

ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಸಭೆಯನವೀಕೃತ ವೆಬ್ ಪೋರ್ಟಲ್‌ ಲೋಕಾರ್ಪಣೆ ಮಾಡಿ ಮಾತನಾಡಿದರು. ‘ನೂತನ ಪೋರ್ಟಲ್ ಮಹಾಸಭಾದ ಸಮಸ್ತ ಚಟುವಟಿಕೆಗಳ ವಿವರಗಳನ್ನು ಒಳಗೊಂಡಿದೆ. ಆನ್‌ಲೈನ್ ಮೂಲಕ ಸದಸ್ಯತ್ವ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಿದೇಶದಲ್ಲಿದ್ದವರೂ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಹಾಗೂ ಸದಸ್ಯತ್ವ ಪಡೆಯಬಹುದು. ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗುವುದು’ ಎಂದು ತಿಳಿಸಿದರು.

‘ಸಮುದಾಯದ ವೈದ್ಯರು ಸೇರಿದಂತೆ ವಿವಿಧ ವೃತ್ತಿಪರರು, ಉದ್ಯಮಿಗಳ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗುವುದು. ರಿಯಾಯಿತಿ ದರದಲ್ಲಿ ವೈದ್ಯಕೀಯ ಸೌಲಭ್ಯ ಹಾಗೂ ಹೊಸ ಉದ್ದಿಮೆ ಸ್ಥಾಪಿಸಲು ಇಚ್ಛಿಸುವ ಸಮಾಜದ ಉತ್ಸಾಹಿ ಯುವ ಉದ್ದಿಮೆದಾರರಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ಜಾರಿಗೊಳಿಸಲಾಗುವುದು.ಮಹಾಸಭೆಯ ವಿವಿಧ ಚಟುವಟಿಕೆಗಳಿಗೆ ಆರ್ಥಿಕವಾಗಿ ನೆರವಾಗಲು ಸಮುದಾಯದ ಅನೇಕರು ಮುಂದೆ ಬಂದಿದ್ದಾರೆ. ಈಗಾಗಲೇ ₹ 25 ಲಕ್ಷ ಭರವಸೆ ದಾನಿಗಳಿಂದ ದೊರಕಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.