ADVERTISEMENT

ಕಟ್ಟಡದ ತಳದಲ್ಲಿ ಬಾವಿ ಪತ್ತೆ: ಮೆಟ್ರೊ ಸುರಂಗ ಕಾಮಗಾರಿ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 18:46 IST
Last Updated 30 ಸೆಪ್ಟೆಂಬರ್ 2021, 18:46 IST
ವೆಂಕಟೇಶಪುರದ ಬಳಿ ‘ನಮ್ಮ ಮೆಟ್ರೊ’ ಸುರಂಗ ಕೊರೆಯುವ ಸ್ಥಳದಲ್ಲಿ ಮಣ್ಣು ಕುಸಿತ ಉಂಟಾಗಿರುವುದು
ವೆಂಕಟೇಶಪುರದ ಬಳಿ ‘ನಮ್ಮ ಮೆಟ್ರೊ’ ಸುರಂಗ ಕೊರೆಯುವ ಸ್ಥಳದಲ್ಲಿ ಮಣ್ಣು ಕುಸಿತ ಉಂಟಾಗಿರುವುದು   

ಬೆಂಗಳೂರು: ನಮ್ಮ ಮೆಟ್ರೊ ಎರಡನೇ ಹಂತದ ರೀಚ್‌ –6 ಮಾರ್ಗದಲ್ಲಿ ವೆಂಕಟೇಶಪುರ –ಟ್ಯಾನರಿ ರಸ್ತೆ ನಿಲ್ದಾಣಗಳ ನಡುವೆ ಸುರಂಗ ಕೊರೆಯುವಾಗ ಕಟ್ಟಡದ ತಳದಲ್ಲಿ ಹಳೇ ಬಾವಿ ಇದ್ದ ಕಡೆ ಕುಸಿತ ಉಂಟಾಗಿದೆ. ಇಲ್ಲಿ ಸುರಂಗ ಕೊರೆಯುವ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಗುರುವಾರ ಬೆಳಿಗ್ಗೆ 7.30ರ ಸುಮಾರಿಗೆ ಟ್ಯಾನರಿ ರಸ್ತೆ ಕಡೆಗೆ ಸುರಂಗ ಕೊರೆಯುವಾಗ ವೆಂಕಟೇಶಪುರ ಮೆಟ್ರೊ ನಿಲ್ದಾಣದಿಂದ 100 ಮೀಟರ್‌ ದೂರದಲ್ಲಿ ಕುಸಿತ ಉಂಟಾಯಿತು. ಸ್ಥಳ ತಪಾಸಣೆ ನಡೆಸಿದಾಗ ಅಲ್ಲಿ ಕಟ್ಟಡದ ತಳಭಾಗದಲ್ಲಿ ಹಳೆಯ ಭಾವಿ ಇದ್ದುದು ಕಂಡು ಬಂತು. ಇಲ್ಲಿ ಕಟ್ಟಡದ ತಳವೂ ಕುಸಿದಿತ್ತು. ಆ ಕಟ್ಟಡದ ನೆಲಮಹಡಿಯಲ್ಲಿ ಕೋಳಿ ಅಂಗಡಿ ಹಾಗೂ ಮೊದಲ ಮಹಡಿಯಲ್ಲಿ ಐವರು ಸದಸ್ಯರಿದ್ದ ಕುಟುಂಬವೊಂದು ವಾಸವಿತ್ತು. ಆ ಕಟ್ಟಡದಲ್ಲಿದ್ದವರನ್ನು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಅಧಿಕಾರಿಗಳು ತಕ್ಷಣವೇ ಸ್ಥಳಾಂತರಿಸಿದರು. ಸುರಕ್ಷತೆ ದೃಷ್ಟಿಯಿಂದ ಅಂಗಡಿಯನ್ನೂ ಮುಚ್ಚಿಸಿದರು.

‘ಕಟ್ಟಡದಲ್ಲಿ ವಾಸವಿದ್ದ ಕುಟುಂಬಕ್ಕೆ ಪಿ.ಜಿ. ಕಟ್ಟಡವೊಂಡದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದೇವೆ. ಸುರಂಗ ಕೊರೆಯುವ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿದ್ದೇವೆ. ನಾಲ್ಕೈದು ದಿನ ಕೆಲಸ ಸ್ಥಗಿತಗೊಳಿಸಬೇಕಾಗುತ್ತದೆ. ಕಾಂಕ್ರೀಟ್‌ ಮಿಶ್ರಣವನ್ನು ತುಂಬಿಸಿ ಬಾವಿಯನ್ನು ಮುಚ್ಚಲಾಗಿದೆ. ಕಾಂಕ್ರೀಟ್‌ ಗಟ್ಟಿಯಾದ ಬಳಿಕ ಸುರಂಗ ಕೊರೆಯುವ ಕಾಮಗಾರಿ ಮತ್ತೆ ಮುಂದುವರಿಯಲಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಈ ಪ್ರದೇಶದಲ್ಲಿ ಸುರಂಗ ಹಾದು ಹೋಗುವ ಅನೇಕ ಬಾವಿಗಳು ಹಾಗೂ ಕೊಳವೆಬಾವಿಗಳು ಇವೆ. ಅವುಗಳನ್ನು ಸುರಂಗ ಕೊರೆಯುವುದಕ್ಕೆ ಮೊದಲೇ ಮುಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಆದರೆ, ವೆಂಕಟೇಶಪುರ ನಿಲ್ದಾಣದ ಬಳಿ ಕುಸಿತ ಉಂಟಾದ ಕಡೆ ಬಾವಿ ಇದ್ದುದು ಆ ಕಟ್ಟಡದ ಮಾಲೀಕರಿಗೂ ತಿಳಿದಿರಲಿಲ್ಲ. ಸಾಕಷ್ಟು ಹಿಂದೆಯೇ ಮಣ್ಣು ಹಾಕಿ ಬಾವಿಯನ್ನು ಮುಚ್ಚಿ ಕಟ್ಟಡ ನಿರ್ಮಿಸಲಾಗಿತ್ತು. ಅದರ ಪಕ್ಕದಲ್ಲಿದ್ದ ಇನ್ನೊಂದು ತೆರೆದ ಬಾವಿಯನ್ನು ಮೊದಲೇ ಮುಚ್ಚಿಸಿದ್ದೆವು’ ಎಂದು ಅವರು ತಿಳಿಸಿದರು.

‘ಸಂತ್ರಸ್ತ ಕುಟುಂಬದವರಿಗೆ ಬೇರೆ ಬಾಡಿಗೆ ಮನೆ ವ್ಯವಸ್ಥೆ ಮಾಡುತ್ತೇವೆ. ಸುರಂಗ ಕೊರೆಯುವ ಯಂತ್ರವು ಈ ಕಟ್ಟಡದ ತಳಭಾಗವನ್ನು ದಾಟಿ ಮುಂದಕ್ಕೆ ಹೋದ ಬಳಿಕ ಇಡೀ ಕಟ್ಟಡವನ್ನು ಮತ್ತೊಮ್ಮೆ ಸಮಗ್ರವಾಗಿ ತಪಾಸಣೆ ನಡೆಸಲಿದ್ದೇವೆ. ಬಿರುಕು ಕಾಣಿಸಿಕೊಂಡಿದ್ದರೆ ದುರಸ್ತಿ ಪಡಿಸಲಿದ್ದೇವೆ. ಕಟ್ಟಡವು ಸುರಕ್ಷಿತವೆಂಬುದು ಖಚಿತವಾದರೆ ಅದನ್ನು ಮತ್ತೆ ಮಾಲೀಕರಿಗೆ ಮರಳಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ನಿವೇಶನ ಮಾರುವಾಗ ಬಾವಿ ಮುಚ್ಚುವ ಮಾಲೀಕರು’

‘ನಗರದಲ್ಲಿ ನಿವೇಶನ ಮಾರಾಟ ಮಾಡುವಾಗ ಕೆಲವು ಮಾಲೀಕರು ಹಳೆ ಬಾವಿಗಳನ್ನು ಮಣ್ಣಿನಿಂದ ಮುಚ್ಚುತ್ತಾರೆ. ನಿವೇಶನ ಖರೀದಿ ಮಾಡುವವರಿಗೂ ಅಲ್ಲಿ ಹಿಂದೆ ಬಾವಿ ಇದ್ದ ವಿಚಾರ ತಿಳಿದಿರುವುದಿಲ್ಲ. ಅವರು ಅದರ ಮೇಲೆಯೇ ಕಟ್ಟಡ ನಿರ್ಮಿಸುತ್ತಾರೆ. ಅಂತಹ ಕಡೆ ಸುರಂಗ ಹಾದು ಹೋದರೆ ಕಾಮಗಾರಿಗೆ ಸ್ವಲ್ಪ ಅಡ್ಡಿ ಉಂಟಾಗುವುದು ಸಹಜ. ಬಾವಿ ಇರುವುದು ಮೊದಲೇ ತಿಳಿದರೆ ಕಾಮಗಾರಿಗೆ ಯಾವುದೇ ಸಮಸ್ಯೆ ಉಂಟಾಗದು’ ಎಂದು ಸುರಂಗ ಕೊರೆಯುವ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುವ ಬಿಎಂಆರ್‌ಸಿಎಲ್‌ನ ಅಧಿಕಾರಿಯೊಬ್ಬರು ತಿಳಿಸಿದರು.

‘ವೆಂಕಟೇಶಪುರ ಹಾಗೂ ಟ್ಯಾನರಿ ರಸ್ತೆ ಮಟ್ರೊ ನಿಲ್ದಾಣಗಳ ನಡುವೆ ಸುರಂಗ ಹಾದು ಹೋಗುವ ಕಡೆ 20 ತೆರೆದ ಬಾವಿಗಳನ್ನು ಹಾಗೂ 11 ಕೊಳವೆ ಬಾವಿಗಳನ್ನು ಗುರುತಿಸಿದ್ದೇವೆ. ಅವುಗಳನ್ನು ಕಾಂಕ್ರೀಟ್‌ನಿಂದ ಮುಚ್ಚಿದ ನಂತರವೇ ಅಲ್ಲಿ ಸುರಂಗ ಕೊರೆಯಲಾಗುತ್ತದೆ. ಬಹುತೇಕ ಬಾವಿ ಹಾಗೂ ಕೊಳವೆಬಾವಿಗಳನ್ನು ಈಗಾಗಲೇ ಮುಚ್ಚಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.