ADVERTISEMENT

5 ವರ್ಷಗಳ ಬಳಿಕವೂ ಪೂರ್ಣಗೊಳ್ಳದ ಮುಂದಾಲೋಚನೆ ಇಲ್ಲದ ಕಾಮಗಾರಿ

ಪಶ್ಚಿಮ ಕಾರ್ಡ್‌ ರಸ್ತೆ: ಮೂರು ಬಾರಿ ಪರಿಷ್ಕರಣೆಯಾದ ಯೋಜನೆ; ಕುಂಟುತ್ತಾ ಸಾಗಿದೆ ಕೆಲಸ

ವಿಜಯಕುಮಾರ್ ಎಸ್.ಕೆ.
Published 9 ಡಿಸೆಂಬರ್ 2021, 16:55 IST
Last Updated 9 ಡಿಸೆಂಬರ್ 2021, 16:55 IST
72ನೇ ಅಡ್ಡರಸ್ತೆ ಬಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್
72ನೇ ಅಡ್ಡರಸ್ತೆ ಬಳಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್   

ಬೆಂಗಳೂರು: ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಮೇಲುಸೇತುವೆಗಳ ನಿರ್ಮಾಣ ಯೋಜನೆ ಪದೇ ಪದೇ ಬದಲಾಗುತ್ತಲೇ ಇದೆ. ಮುಂದಾಲೋಚನೆ ಇಲ್ಲದೆಯೇ ಕಾಮಗಾರಿ ಆರಂಭಿಸಿದ್ದರಿಂದ ವಾಹನ ಸವಾರರು ಐದು ವರ್ಷಗಳಿಂದ ಸಂಚಾರ ಕಿರಿಕಿರಿ ಎದುರಿಸುತ್ತಿದ್ದಾರೆ.

ದೀಪಾಂಜಲಿನಗರ ಮೆಟ್ರೊ ನಿಲ್ದಾಣದಿಂದ ಆರಂಭವಾಗಿ ವಿಜಯನಗರ, ಹೊಸಹಳ್ಳಿ, ಬಸವೇಶ್ವರನಗರ, ರಾಜಾಜಿನಗರ, ಇಸ್ಕಾನ್‌ ದೇವಸ್ಥಾನದ ಮುಂಭಾಗದಿಂದ ಹಾದು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ತನಕ ಈ ರಸ್ತೆ ಇದೆ. ರಾಜಾಜಿನಗರದಿಂದ ಮಾಗಡಿ ರಸ್ತೆ ಟೋಲ್‌ಗೇಟ್ ಜಂಕ್ಷನ್ ತನಕ ನಿಲುಗಡೆ ರಹಿತ ಎತ್ತರಿಸಿದ (ಎಲಿವೇಟೆಡ್‌) ರಸ್ತೆ ನಿರ್ಮಿಸುವ ಯೋಜನೆಗೆ 2015ರಲ್ಲಿ ಅನುಮೋದನೆ ನೀಡಲಾಯಿತು. 2016ರಲ್ಲಿ ಕಾಮಗಾರಿ ಆರಂಭವಾಯಿತು.

ಮಂಜುನಾಥನಗರದ ಬಳಿ ಮೇಲುಸೇತುವೆ, ಶಿವನಗರ ಜಂಕ್ಷನ್ ಬಳಿ ಕೆಳಸೇತುವೆ ಹಾಗೂ ಬಸವೇಶ್ವರ ವೃತ್ತದಲ್ಲಿ ಏಕಮುಖ ಮೇಲುಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಯೋಜನೆಯಲ್ಲಿ ಯಾವುದೇ ಬದಲಾವಣೆ ಆಗದಿದ್ದರಿಂದ ಮಂಜುನಾಥನಗರ ಮೇಲ್ಸೇತುವೆ ಕಾಮಗಾರಿ ಮೊದಲಿಗೆ ಪೂರ್ಣಗೊಂಡಿತು. ಶಿವನಗರದಲ್ಲಿ ಕೆಳ ಸೇತುವೆ ಬದಲಿಗೆ ಮೇಲುಸೇತುವೆ ನಿರ್ಮಿಸಲು ಯೋಜನೆ ಬದಲಿಸಲಾಯಿತು. ಬಹುತೇಕ ಐದು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಯಿತು.

ADVERTISEMENT

ಇನ್ನೊಂದೆಡೆ ಬಸವೇಶ್ವರನಗರ ಮುಖ್ಯ ರಸ್ತೆಯಿಂದ ಕಾರ್ಡ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಜಂಕ್ಷನ್‌ನಲ್ಲಿ ಏಕಮುಖ ಮೇಲುಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಐದು ವರ್ಷಗಳಿಂದ ಕಾಮಗಾರಿ ಕುಂಟುತ್ತಲೇ ಸಾಗಿದೆ. ಕಾಮಗಾರಿಗೆ ಅಗೆದು ಬಿಟ್ಟಿರುವ ಜಾಗದಲ್ಲಿ ಗಿಡಗಳು ಬೆಳೆದು ನಿಂತಿವೆ. ಇದರ ನಡುವೆ ಈಗ ಇನ್ನೊಂದು ಬದಿಗೂ ಮೇಲುಸೇತುವೆ ನಿರ್ಮಿಸಲು ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

‘5 ವರ್ಷಗಳಿಂದ ಒಂದು ಬದಿಯ ಮೇಲುಸೇತುವೆ ನಿರ್ಮಾಣವನ್ನೂ ಗುತ್ತಿಗೆದಾರರು ಪೂರ್ಣಗೊಳಿಸಿಲ್ಲ. ಇನ್ನೊಂದು ಬದಿಯ ಸೇತುವೆಗೆ ಅನುಮೋದನೆ ಪಡೆದು ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಐದು ವರ್ಷ ಕಾಯಬೇಕಾಗಬಹುದು’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ರಾಜಾಜಿನಗರ 72ನೇ ಅಡ್ಡರಸ್ತೆ ಮೇಲುಸೇತುವೆ ಕಾಮಗಾರಿಯನ್ನೂ ಈ ಯೋಜನೆ ಜೊತೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದ್ದು, ಕಾಮಗಾರಿ ಕೂಡ ಆಮೆಗತಿಯಲ್ಲಿ ನಡೆಯುತ್ತಿದೆ. ಸ್ಥಳದಲ್ಲಿನ ಲಕ್ಷಣ ಗಮನಿಸಿದರೆ ಕಾಮಗಾರಿ ಬೇಗ ಮುಗಿಯುವ ಲಕ್ಷಣಗಳಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾಗಡಿ ರಸ್ತೆಯಲ್ಲಿ ಟೋಲ್‌ಗೇಟ್‌ ಜಂಕ್ಷನ್ ದಾಟಿದ ಕೂಡಲೇ ಕಾರ್ಡ್‌ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಇಲ್ಲ. ಕಿರಿದಾದ ಸರ್ವೀಸ್ ರಸ್ತೆಯಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿಕೊಂಡು ಜನರನ್ನು ಗೋಳಾಡಿಸುತ್ತಿದ್ದಾರೆ’ ಎಂದು ಬಸವೇಶ್ವರನಗರ ಜನಾರ್ಧನ್ ಹೇಳಿದರು.

‘ವಿಳಂಬಕ್ಕೆ ಹೊಣೆ ಯಾರು’

‘ಸಂಚಾರ ಸಮಸ್ಯೆ ಬಗ್ಗೆ ಅಧ್ಯಯನ ನಡೆಸದೆ ಸಮಗ್ರ ಯೋಜನಾ ವರದಿ(ಡಿಪಿಆರ್‌) ರೂಪಿಸಿದ್ದರಿಂದ ಪದೇ ಪದೇ ಯೋಜನೆ ಬದಲಾಗಿದೆ’ ಎನ್ನುತ್ತಾರೆ ತಜ್ಞರು.

ಬಸವೇಶ್ವರನಗರ ಜಂಕ್ಷನ್‌ನಲ್ಲಿ ಒಂದು ಬದಿಯ ಮೇಲ್ಸೇತುವೆ ಕಾಮಗಾರಿಗೆ ಯಾವುದೇ ಅಡ್ಡಿ ಇರಲಿಲ್ಲ. ಆದರೂ, ಐದು ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸಿಲ್ಲ. ಪಂಚ ವಾರ್ಷಿಕ ಗುರಿಯನ್ನೂ ಗುತ್ತಿಗೆದಾರರು ತಲುಪಿಲ್ಲ’ ಎಂದು ರಾಜಾಜಿನಗರದ ಪ್ರವೀಣ್ ಅಸಮಾಧಾನ ವ್ಯಕ್ತಪಡಿಸಿದರು.

‘ಮುಂದಾಲೋಚನೆ ಇಲ್ಲದೆ ಅಧಿಕಾರಿಗಳು ರೂಪಿಸಿದ ಯೋಜನೆ, ತಮ್ಮ ಅನುಕೂಲಕ್ಕೆ ತಕ್ಕಂತೆ ಜನಪ್ರತಿನಿಧಿಗಳು ಕೈಗೊಳ್ಳುವ ನಿರ್ಧಾರ, ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸದ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ವಾಹನ ಸವಾರರು ತೊಂದರೆ ಅನುಭವಿಸಬೇಕಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜೂನ್‌ ವೇಳೆಗೆ ಕಾಮಗಾರಿ ಪೂರ್ಣ’

‘ಸೇತುವೆಗಳನ್ನು ಒಂದಕ್ಕೊಂದು ಜೊಡಣೆ ಮಾಡಬೇಕಿರುವ ಕಾರಣ ಬಸವೇಶ್ವರನಗರ ಜಂಕ್ಷನ್‌ ಕಾಮಗಾರಿ ವಿಳಂಬವಾಗಿದೆ. ಮುಂದಿನ ಜೂನ್‌ ವೇಳೆಗೆ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳ್ಳಲಿವೆ’ ಎಂದು ಶಾಸಕ ಎಸ್.ಸುರೇಶ್‌ಕುಮಾರ್ ತಿಳಿಸಿದರು.

‘ಮೂಲ ಯೋಜನೆಯ ಜೊತೆಗೆ 72ನೇ ಕ್ರಾಸ್‌ನಲ್ಲಿ ಮೇಲ್ಸೇತುವೆ, ಬಸವೇಶ್ವರನಗರ ಜಂಕ್ಷನ್‌ನಲ್ಲಿ ಮತ್ತೊಂದು ಮೇಲ್ಸೇತುವೆ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಹಾಗಾಗಿ, ಕಾಮಗಾರಿ ವಿಳಂಬವಾಗಿದೆ. ಡಿಪಿಆರ್‌ನಲ್ಲೇ ಈ ಕಾಮಗಾರಿಗಳನ್ನು ಒಳಗೊಂಡಿದ್ದರೆ ಇಷ್ಟು ವಿಳಂಬ ಆಗುತ್ತಿರಲಿಲ್ಲ ಎಂಬುದು ಸತ್ಯ’ ಎಂದರು.

ಅಂಕಿ–ಅಂಶ
- ಕಾರ್ಡ್‌ ರಸ್ತೆಯ ಉದ್ದ:8 ಕಿ.ಮೀ
- ಕಾಮಗಾರಿ ಪೂರ್ಣಗೊಂಡ ಮೇಲ್ಸೇತುವೆಗಳು: 2
- ಕಾಮಗಾರಿ ಪೂರ್ಣಗೊಳ್ಳಬೇಕಿರುವ ಮೇಲ್ಸೇತುವೆಗಳು: 2
- ಯೋಜನೆಯ ಒಟ್ಟು ಮೊತ್ತ-₹ 169.4 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.