ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ನಕಲಿ ಖಾತೆ: ಬಂಧನ

ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 22:27 IST
Last Updated 11 ಆಗಸ್ಟ್ 2020, 22:27 IST
ಸಮೀರ್‌ ಕುಮಾರ್
ಸಮೀರ್‌ ಕುಮಾರ್   

ಬೆಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಮಹಿಳೆಯೊಬ್ಬರ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚಿಸಿದ್ದ ಆರೋಪದಡಿ ಸಮೀರ್‌ ಕುಮಾರ್ (25) ಎಂಬಾತನನ್ನು ಪೂರ್ವ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿಯ ಕೃತ್ಯದ ಬಗ್ಗೆ ಮಂಜುಳಾ ಎಂಬುವರು ದೂರು ನೀಡಿದ್ದರು. ಅದರನ್ವಯ ಪಶ್ಚಿಮ ಬಂಗಾಳದ ಸಮೀರ್‌ಕುಮಾರ್‌ನನ್ನು ಬಂಧಿಸಲಾಗಿದೆ. ಆತನಿಂದ ಮೊಬೈಲ್ ಹಾಗೂ ಸಿಮ್‌ ಕಾರ್ಡ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಸಮೀರ್‌ ಕುಮಾರ್‌, ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದ. ಜೀವನ ನಿರ್ವಹಣೆ ಕಷ್ಟವಾಗಿದ್ದರಿಂದ ಬೇರೆ ಕಂಪನಿಯಲ್ಲಿ ಕೆಲಸಕ್ಕೆ ಹುಡುಕಾಟ ನಡೆಸುತ್ತಿದ್ದ. ಇತ್ತೀಚೆಗೆ ಇಂದಿರಾನಗರದ ಕಂಪನಿಯೊಂದರಲ್ಲಿ ಸಂದರ್ಶನಕ್ಕೆ ಹೋಗಿದ್ದ. ಅದೇ ಸಂದರ್ಭದಲ್ಲಿ ಕಂಪನಿ ಉದ್ಯೋಗಿಗಳ ಹೆಸರು- ವಿಳಾಸವನ್ನು ಆರೋಪಿ ತಿಳಿದುಕೊಂಡಿದ್ದ’ ಎಂದು ಮಾಹಿತಿ ನೀಡಿದರು.

‘ನಕಲಿ ದಾಖಲೆಗಳನ್ನು ಕೊಟ್ಟು ಹೊಸ ಸಿಮ್‌ ಕಾರ್ಡ್‌ ಖರೀದಿಸಿದ್ದ ಆರೋಪಿ, ಅದೇ ಸಂಖ್ಯೆ ಬಳಸಿಕೊಂಡು ವಾಟ್ಸ್‌ಆ್ಯಪ್‌ನಲ್ಲಿ ನಕಲಿ ಖಾತೆಯೊಂದನ್ನು ತೆರೆದಿದ್ದ. ಅದೇ ಖಾತೆಗೆ ಮಂಜುಳಾ ಅವರ ಫೋಟೊವನ್ನು ಅಪ್‌ಲೋಡ್‌ ಮಾಡಿ, ಅವರದ್ದೇ ಖಾತೆ ಎಂದು ಬಿಂಬಿಸಿದ್ದ’ ಎಂದೂ ಪೊಲೀಸರು ತಿಳಿಸಿದರು.

‘ಮಂಜುಳಾ ಅವರ ಸ್ನೇಹಿತರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದ ಆರೋಪಿ, ‘ನನ್ನ ತಾಯಿಗೆ ಹುಷಾರಿಲ್ಲ. ವೈದ್ಯಕೀಯ ಚಿಕಿತ್ಸೆಗೆ ಹಣ ಬೇಕಿದೆ. ಹಣ ವರ್ಗಾವಣೆ ಮಾಡಿ’ ಎಂದಿದ್ದ. ಬ್ಯಾಂಕ್‌ ಖಾತೆಯೊಂದರ ವಿವರವನ್ನೂ ಕಳುಹಿಸಿದ್ದ. ಮಂಜುಳಾ ಅವರೇ ಸಂದೇಶ ಕಳುಹಿಸಿರಬಹುದೆಂದು ನಂಬಿದ್ದ ಸ್ನೇಹಿತರೊಬ್ಬರು, ₹4,500 ನೀಡಿದ್ದರು. ಈ ವಿಷಯ ಮಂಜುಳಾ ಅವರಿಗೆ ಇತ್ತೀಚೆಗೆ ಗೊತ್ತಾಗಿತ್ತು. ಬಳಿಕ ಅವರು ಠಾಣೆಗೆ ದೂರು ನೀಡಿದ್ದರು’ ಎಂದೂ ವಿವರಿಸಿದರು.

‘ಲಾಕ್‌ಡೌನ್‌ನಿಂದ ಕೆಲಸ ಹೋಯಿತು. ಮನೆಯಲ್ಲಿ ಬಡತನವಿದ್ದು, ಜೀವನ ನಡೆಸುವುದು ಕಷ್ಟವಾಗಿತ್ತು. ಹೀಗಾಗಿ, ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದೂ ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.