ADVERTISEMENT

ವ್ಹೀಲಿಂಗ್: ಮೂವರು ವಿದ್ಯಾರ್ಥಿಗಳ ಸಾವು

ಬೈಕ್ ವ್ಹೀಲಿಂಗ್ ಮಾಡಲು ಹೋಗಿ ಅವಘಡ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 19:34 IST
Last Updated 21 ಜೂನ್ 2020, 19:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಬಳ್ಳಾರಿ ರಸ್ತೆಯಲ್ಲಿ ಬೈಕ್‌ ವ್ಹೀಲಿಂಗ್ ಮಾಡಲು ಹೋಗಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸೇರಿ ಮೂವರು ದುರ್ಮರಣಕ್ಕೀಡಾಗಿದ್ದಾರೆ.

‘ನಾಗವಾರ ಗೋವಿಂದಪುರದ ಸೈಯದ್ ರಿಯಾಜ್ ಪಾಷ (18), ಮಾಜ್ ಅಹಮದ್ ಖಾನ್ (17) ಹಾಗೂ ಮಹಮ್ಮದ್ ಹದಿ ಅಯಾನ್ (18) ಮೃತರು. ಇವರಲ್ಲಿ ಒಬ್ಬಾತ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಇನ್ನಿಬ್ಬರು ಪಿಯುಸಿಯಲ್ಲಿ ಓದುತ್ತಿದ್ದರು’ ಎಂದು ಯಲಹಂಕ ಪೊಲೀಸರು ಹೇಳಿದರು.

‘ಒಂದೇ ಪ್ರದೇಶದಲ್ಲಿ ವಾಸವಿರುವ ಮೂವರು, ಭಾನುವಾರ ಬೆಳಿಗ್ಗೆ 6.30ರ ಸುಮಾರಿಗೆ ಯಮಹಾ ಆರ್‌ಎಕ್ಸ್‌ಬೈಕ್ (ನೋಂದಣಿ ಸಂಖ್ಯೆ ಇರಲಿಲ್ಲ) ಹಾಗೂ ಹೊಂಡಾ ಡಿಯೊ ದ್ವಿಚಕ್ರ ವಾಹನದಲ್ಲಿ‌ ಬಳ್ಳಾರಿ ರಸ್ತೆಗೆ ಬಂದಿದ್ದರು. ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯ ಪ್ರವೇಶ ದ್ವಾರದ ಬಳಿಯೇವೇಗವಾಗಿ ಬೈಕ್ ಓಡಿಸಿ ವ್ಹೀಲಿಂಗ್ ಮಾಡಿದ್ದರು. ಅದೇ ಸಂದರ್ಭದಲ್ಲೇ ಎರಡು ಬೈಕ್‌ಗಳು ಪರಸ್ಪರ ಡಿಕ್ಕಿಯಾಗಿದ್ದವು.’

ADVERTISEMENT

‘ಅಪಘಾತದಿಂದಾಗಿ ಎರಡೂ ಬೈಕ್‌ಗಳು ಜಖಂಗೊಂಡಿದ್ದವು. ಮೂವರು ರಕ್ತದ ಮಡುವಿನಲ್ಲೇ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರು. ಸ್ಥಳೀಯರು ರಕ್ಷಣೆಗೆ ಹೋಗಿದ್ದರು. ಅಷ್ಟರಲ್ಲೇ ಇಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. ಇನ್ನೊಬ್ಬನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆತ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ’ ಎಂದೂ ಪೊಲೀಸರು ತಿಳಿಸಿದರು.

‘ಖಾಲಿ ರಸ್ತೆಯಲ್ಲಿ ವ್ಹೀಲಿಂಗ್ ಮಾಡಲೆಂದೇ ಯುವಕರು ರಸ್ತೆಗೆ ಬಂದಿದ್ದರು. ವೇಗವಾಗಿ ಬೈಕ್ ಓಡಿಸಿದ್ದೇ ಅಪಘಾತಕ್ಕೆ ಕಾರಣವೆಂದು ಗೊತ್ತಾಗಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಅಪಘಾತ ಸಂಬಂಧ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗಿದೆ’ ಎಂದೂ ಹೇಳಿದರು.

ಪ್ರಕರಣ ಹೆಚ್ಚು: ಬಳ್ಳಾರಿ ರಸ್ತೆ, ಹೊರ ವರ್ತುಲ ರಸ್ತೆ ಹಾಗೂ ನೈಸ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವ್ಹೀಲಿಂಗ್ ಮಾಡುವವರಲ್ಲಿ 16ರಿಂದ 22 ವರ್ಷದ ಒಳಗಿನ ಯುವಕರೇ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.