ADVERTISEMENT

ಕೆಂಪಣ್ಣ ಎಲ್ಲಿದ್ದೀರಿ? ಬಸವರಾಜ್ ಬೊಮ್ಮಾಯಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2023, 6:38 IST
Last Updated 20 ಜೂನ್ 2023, 6:38 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ನಮ್ಮ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ಜತೆ ಸೇರಿಕೊಂಡು ಸುಳ್ಳು ಆರೋಪಗಳನ್ನು ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎಲ್ಲಿ ಹೋಗಿದ್ದಾರೆ? ಗುತ್ತಿಗೆದಾರರ ಬಿಲ್‌ನ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ. ಸಚಿವರು ರೇಟ್‌ ಫಿಕ್ಸ್‌ ಮಾಡಿಕೊಳ್ಳುತ್ತಿದ್ದಾರೆ. ಕೆಂಪಣ್ಣ ಏಕೆ ಮಾತನಾಡುತ್ತಿಲ್ಲ’  ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಹುತೇಕ ಸಚಿವರು ಹಿಂದಿನ ಸರ್ಕಾರದ ಚಾಲ್ತಿಯಲ್ಲಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸಿದ್ದಾರೆ’ ಎಂದು ದೂರಿದರು.

‘ಸರ್ಕಾರ ಬಂದು ಒಂದು ತಿಂಗಳು ಕಳೆದರೂ ಯಾರೂ ತಮ್ಮ ಇಲಾಖೆಗಳ ಪ್ರಗತಿಯ ಬಗ್ಗೆ ಮಾತನಾಡುತ್ತಿಲ್ಲ. ಮಳೆಗಾಲ ಆರಂಭವಾಗುತ್ತಿದೆ, ಒಂದು ವರ್ಷದ ಕಾಮಗಾರಿಗಳನ್ನು ಅಸ್ತವ್ಯಸ್ತಗೊಳಿಸಲು ಮುಂದಾಗಿದ್ದಾರೆ’ ಎಂದರು.

ADVERTISEMENT

'ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್‌ ಸರ್ಕಾರ ಗೊಂದಲದ ಗೂಡಾಗಿದೆ. ಉಚಿತ ಬಸ್‌ ಪ್ರಯಾಣವೂ ಸೇರಿ ಗ್ಯಾರಂಟಿ ಯೋಜನೆಗಳು ಅಧ್ವಾನ ಆಗಿವೆ' ಎಂದು ಟೀಕಿಸಿದರು. 

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐದು ವರ್ಷ ಪೂರ್ಣಗೊಳಿಸುವ ಸಾಧ್ಯತೆ ಇಲ್ಲ ಎಂದು ಅವರ ಸಂಪುಟ ಸಹೋದ್ಯೋಗಿಗಳೇ ಹೇಳುತ್ತಿದ್ದಾರೆ ಎಂದೂ ಬೊಮ್ಮಾಯಿ ಹೇಳಿದರು.

‘ಸರಿಯಾಗಿ ಬಸ್‌ಗಳ ವ್ಯವಸ್ಥೆ ಮಾಡದೇ ಉಚಿತ ಬಸ್‌ ಯೋಜನೆ ಜಾರಿ ಮಾಡಿದ್ದಾರೆ. ಇದರಿಂದ ಸಾರ್ವಜನಿಕರು ಸರ್ಕಾರದ ವಿರುದ್ಧ ಬಾಯಿಗೆ ಬಂದ ಹಾಗೆ ಬೈಯ್ಯುತ್ತಿದ್ದಾರೆ. ಅವ್ಯವಸ್ಥೆಯ ಮಧ್ಯೆ ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.