ADVERTISEMENT

ಹೆಣ್ಣು ಭ್ರೂಣಹತ್ಯೆ ಜಾಮೀನು ರಹಿತ ಅಪರಾಧ: ಸಚಿವ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 15:36 IST
Last Updated 14 ಡಿಸೆಂಬರ್ 2023, 15:36 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ವಿಧಾನಸಭೆ: ಹೆಣ್ಣು ಭ್ರೂಣ ಹತ್ಯೆಯನ್ನು ಜಾಮೀನುರಹಿತ ಅಪರಾಧವನ್ನಾಗಿ ಪರಿಗಣಿಸಲಾಗುವುದು. ಈ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಮಂಡ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ಪತ್ತೆಯಾಗಿರುವ ಕುರಿತು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಸೇರಿದಂತೆ ಹಲವು ಸದಸ್ಯರು ಗುರುವಾರ ನಡೆಸಿದ ಅರ್ಧ ಗಂಟೆ ಕಾಲಾವಧಿ ಚರ್ಚೆಗೆ ಉತ್ತರ ನೀಡಿದ ಸಚಿವರು, ‘ಈಗ ಇರುವ ಕಾನೂನಿನಲ್ಲಿ ಕಠಿಣ ಕ್ರಮಗಳಿಗೆ ಅವಕಾಶವಿಲ್ಲ. ಆದ್ದರಿಂದ ಭಾರತೀಯ ದಂಡ ಸಂಹಿತೆ (ಐಪಿಸಿ) ಸೇರಿದಂತೆ ಅಗತ್ಯವಿರುವ ಕಾನೂನುಗಳಿಗೆ ತಿದ್ದುಪಡಿ ತರಲಾಗುವುದು’ ಎಂದರು.

ADVERTISEMENT

ರಾಜ್ಯದ ವಿವಿಧೆಡೆ ಪತ್ತೆಯಾಗಿರುವ ಪ್ರಕರಣಗಳಲ್ಲಿ ಐಪಿಸಿಯ 315 ಮತ್ತು 316ನೇ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಹೆಣ್ಣು ಭ್ರೂಣಹತ್ಯೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಅದನ್ನು ಜಾಮೀನುರಹಿತ ಅಪರಾಧ ಎಂದು ಘೋಷಿಸಬೇಕಿದೆ. ಅದಕ್ಕೆ ಪೂರಕವಾದ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ಭ್ರೂಣಹತ್ಯೆಯಲ್ಲಿ ಭಾಗಿಯಾಗುವ ವೈದ್ಯರು, ತಂತ್ರಜ್ಞರು, ಆಸ್ಪತ್ರೆ ಮತ್ತು ಸ್ಕ್ಯಾನಿಂಗ್‌ ಕೇಂದ್ರಗಳ ಸಿಬ್ಬಂದಿ, ಮಾಲೀಕರ ಜತೆಯಲ್ಲಿ ಭ್ರೂಣದ ತಾಯಿ, ತಂದೆ ಮತ್ತು ಒತ್ತಡ ಹೇರಿದ ಸಂಬಂಧಿಗಳನ್ನೂ ಆರೋಪಿಗಳಾಗಿ ಪರಿಗಣಿಸಬೇಕಿದೆ. ಈ ದಿಸೆಯಲ್ಲೂ ಕಾನೂನು ತಿದ್ದುಪಡಿ ಮಾಡಲಾಗುವುದು ಎಂದರು.

ಹೆಣ್ಣು ಭ್ರೂಣಹತ್ಯೆ ತಡೆಗೆ ರಾಜ್ಯಮಟ್ಟದ ಕಾರ್ಯಪಡೆಯೊಂದನ್ನು ನೇಮಿಸಲಾಗುವುದು. ಉಪ ವಿಭಾಗ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ರಹಸ್ಯ ಕಾರ್ಯಾಚರಣೆ ಮೂಲಕ ಸ್ಕ್ಯಾನಿಂಗ್‌ ಕೇಂದ್ರಗಳು, ಆಸ್ಪತ್ರೆಗಳ ತಪಾಸಣೆಗೆ ನಿರ್ದೇಶನ ನೀಡಲಾಗಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಶೇಷ ನೀತಿ: ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಾನೂನು ಕ್ರಮಗಳ ಜತೆಯಲ್ಲೇ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವೂ ಇದೆ. ಇದಕ್ಕಾಗಿ ವಿಶೇಷ ನೀತಿಯೊಂದನ್ನು ರೂಪಿಸಲಾಗುವುದು ಎಂದರು.

ಸ್ವತಃ ವೈದ್ಯರಾಗಿರುವ ಕಾಂಗ್ರೆಸ್‌ನ ಮಂಥರ್‌ ಗೌಡ, ಎಚ್‌.ಡಿ.ರಂಗನಾಥ್‌, ಎನ್‌.ಟಿ. ಶ್ರೀನಿವಾಸ್‌, ಬಿಜೆಪಿಯ ಶೈಲೇಂದ್ರ ಬೆಲ್ದಾಳೆ ಭ್ರೂಣಹತ್ಯೆ ತಡೆಯುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಿದರು. ಬಿಜೆಪಿಯ ಶಶಿಕಲಾ ಜೊಲ್ಲೆ, ಬಿ. ಸುರೇಶ್‌ ಗೌಡ, ಕಾಂಗ್ರೆಸ್‌ನ ರೂಪಕಲಾ  ಅವರು, ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.