ADVERTISEMENT

ಅಕ್ರಮ ಕಂಡರೆ ನೇರ ಮಾಹಿತಿ ಕೊಡಿ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 16:44 IST
Last Updated 29 ಮಾರ್ಚ್ 2022, 16:44 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ    

ಬೆಂಗಳೂರು: ‘ಕ್ಯಾಸಿನೋ, ಜೂಜು, ಡ್ಯಾನ್ಸ್‌ ಬಾರ್‌, ಮಾದಕವಸ್ತು ಮಾರಾಟ ಸೇರಿದಂತೆ ಯಾವುದೇ ಬಗೆಯ ಅಕ್ರಮಗಳು ಕಂಡರೂ ನೇರವಾಗಿ ನನಗೆ ಮಾಹಿತಿ ಕೊಡಿ. ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇನೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಹುಕ್ಕಾ ಬಾರ್‌ಗಳನ್ನು ನಿಯಂತ್ರಿಸುವಂತೆ ಆಗ್ರಹಿಸಿ ವಿಧಾನ ಪರಿಷತ್‌ನಲ್ಲಿ ಮಂಗಳವಾರ ನಡೆದ ಚರ್ಚೆಗೆ ಉತ್ತರಿಸಿದ ಅವರು, ‘ನಾನು ಗೃಹ ಸಚಿವನಾದ ಬಳಿಕ ಬೆಂಗಳೂರಿನಲ್ಲಿ ಕ್ಯಾಸಿನೋ ಮತ್ತು ಡಾನ್ಸ್‌ ಬಾರ್‌ಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಿಸಿದ್ದೇನೆ. ಹಣವನ್ನು ಪಣವಾಗಿಟ್ಟು ನಡೆಯುವ ಜೂಜುಗಳನ್ನು ತಡೆಯಲು ಕಠಿಣ ಕ್ರಮ ಕೈಗೊಂಡಿದ್ದೇನೆ’ ಎಂದರು.

ಮಾದಕವಸ್ತು ಮಾರಾಟ, ಸೇವನೆ ವಿರುದ್ಧ ನಿರಂತರ ನಿಗಾ ಇಡಲಾಗಿದೆ. ಆದರೂ, ಪೊಲೀಸರ ಕಣ್ತಪ್ಪಿಸಿ ಅಥವಾ ಅವರ ಸಹಕಾರದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಲ್ಲಿ ತಮಗೆ ನೇರವಾಗಿ ದೂರು ನೀಡಬಹುದು. ರಹಸ್ಯವಾಗಿ ಮಾಹಿತಿ ಹಂಚಿಕೊಂಡರೂ ಸಾಕು. ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌, ನಜೀರ್‌ ಅಹ್ಮದ್, ಜೆಡಿಎಸ್‌ನ ಮರಿತಿಬ್ಬೇಗೌಡ, ಎಚ್‌.ಎಂ. ರಮೇಶ್‌ ಗೌಡ, ನಗರದಲ್ಲಿ ಹುಕ್ಕಾ ಬಾರ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.