ADVERTISEMENT

ಆಸ್ಪತ್ರೆಯಲ್ಲಿ ಮಹಿಳೆ ಸಾವು: ಸಂಬಂಧಿಕರಿಂದ ಗಲಾಟೆ

YELAHANKA

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 19:39 IST
Last Updated 6 ಡಿಸೆಂಬರ್ 2018, 19:39 IST
ಮೃತರ ಸಂಬಂಧಿಕರ ದಾಂಧಲೆಯಿಂದ ಆಸ್ಪತ್ರೆಯ ಗಾಜುಗಳು ಪುಡಿಯಾದವು
ಮೃತರ ಸಂಬಂಧಿಕರ ದಾಂಧಲೆಯಿಂದ ಆಸ್ಪತ್ರೆಯ ಗಾಜುಗಳು ಪುಡಿಯಾದವು   

ಬೆಂಗಳೂರು: ವೈದ್ಯರ ನಿರ್ಲಕ್ಷ್ಯದಿಂದಲೇ ರೋಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತ ಮಹಿಳೆಯ ಸಂಬಂಧಿಕರು,ಯಲಹಂಕದ ಅಪೂರ್ವ ಆಸ್ಪತ್ರೆಗೆ ನುಗ್ಗಿ ಕಿಟಕಿಗಳ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ರಕ್ತದೊತ್ತಡದಿಂದ ಬಳಲುತ್ತಿದ್ದ ವಿನಾಯಕನಗರದ ವಿಜಯಾ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ‘ಸಿಬ್ಬಂದಿ ಬುಧವಾರ ರಾತ್ರಿ 11 ಗಂಟೆಯವರೆಗೂ ಚಿಕಿತ್ಸೆ ನೀಡದೆ ಸತಾಯಿಸಿದರು. ಬಳಿಕ ಪರೀಕ್ಷಿಸಿದರು. ಸರಿಯಾಗಿ ಚಿಕಿತ್ಸೆ ನೀಡದ ಕಾರಣ ವಿಜಯಾ ಮೃತಪಟ್ಟರು’ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

‘ಸೂಕ್ತ ಚಿಕಿತ್ಸೆ ದೊರೆತಿದ್ದರೆ ನಮ್ಮ ತಾಯಿ ಬದುಕುತ್ತಿದ್ದರು. ಅಮ್ಮನ ಸಾವಿಗೆ ಡಾ. ರಾಮಚಂದ್ರರ ನಿರ್ಲಕ್ಷ್ಯವೇ ಕಾರಣ’ ಎಂದು ಮೃತ ಮಹಿಳೆಯ ಮಗ ಸುರೇಶ್ ಯಲಹಂಕ ಠಾಣೆಗೆ ದೂರು ನೀಡಿದ್ದಾರೆ. ಈ ನಡುವೆ ಮೃತ ಮಹಿಳೆಯ ಸಂಬಂಧಿಕರು ಮತ್ತು ಸ್ಥಳೀಯರು ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಗಾಜು ಮತ್ತು ಪೀಠೋಪಕರಣಗಳನ್ನು ಒಡೆದು ಗಲಾಟೆ ಎಬ್ಬಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

‘ರೋಗಿ ದಾಖಲಾದ ಬಳಿಕ ವೈದ್ಯಕೀಯ ಸಿಬ್ಬಂದಿ ಇಸಿಜಿ ಪರೀಕ್ಷೆ ನಡೆಸಿದ್ದಾರೆ. ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ಫಲಕಾರಿ ಆಗದೇ ಮಹಿಳೆ ಮೃತಪಟ್ಟಿದ್ದಾರೆ’ ಎಂದುಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಮಚಂದ್ರ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.