ADVERTISEMENT

ಕೋವಿಶೀಲ್ಡ್ ಎರಡನೇ ಡೋಸ್: ರಸ್ತೆಯಲ್ಲಿ ಕುಸಿದು ಬಿದ್ದು ಮಹಿಳೆ ಸಾವು

ಕೋವಿಶೀಲ್ಡ್ ಎರಡನೇ ಡೋಸ್ ಪಡೆದಿದ್ದ ಮಂಗಳಾ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 18:30 IST
Last Updated 22 ಅಕ್ಟೋಬರ್ 2021, 18:30 IST

ಬೆಂಗಳೂರು: ರಾಜಗೋಪಾಲನಗರ ಠಾಣೆ ವ್ಯಾಪ್ತಿಯಲ್ಲಿ ರಸ್ತೆಯಲ್ಲೇ ಕುಸಿದು ಬಿದ್ದು ಮಂಗಳಾ (36) ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

‘ಕಾಮಾಕ್ಷಿಪಾಳ್ಯದ ಲಕ್ಷ್ಮಣನಗರ ನಿವಾಸಿಯಾಗಿದ್ದ ಮಂಗಳಾ, ಪತಿ ದಿನೇಶ್ ಜೊತೆ ವಾಸವಿದ್ದರು. ಅವರ ಸಾವಿನಲ್ಲಿ ಅನುಮಾನ ಇರುವುದಾಗಿ ಪತಿ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದ ಮಂಗಳಾ, ಎರಡನೇ ಡೋಸ್‌ ಪಡೆಯಲೆಂದು ಹೆಗ್ಗನಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ತೆರಳಿದ್ದರು. ಬೆಳಿಗ್ಗೆ 11.20 ಗಂಟೆಗೆ ಲಸಿಕೆ ಪಡೆದು, ವಾಪಸು ಮನೆಗೆ ಬಂದಿದ್ದರು.’

ADVERTISEMENT

‘ಐದು ನಿಮಿಷವಷ್ಟೇ ಮನೆಯಲ್ಲಿದ್ದ ಮಹಿಳೆ, ಚೀಟಿ ಹಣ ಕಟ್ಟಲೆಂದು ಮಾರುಕಟ್ಟೆಯಲ್ಲಿದ್ದ ಪರಿಚಯಸ್ಥರ ಬಳಿ ಹೊರಟಿದ್ದರು. ನಡೆದುಕೊಂಡು ತೆರಳುತ್ತಿದ್ದ ಅವರು, ಮಾರ್ಗಮಧ್ಯೆಯೇ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದರು. ತಕ್ಷಣವೇ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದೂ ಪೊಲೀಸರು ವಿವರಿಸಿದರು.

ಕೋವಿಡ್‌ ಲಸಿಕೆ ಕಾರಣ?: ‘ಪತ್ನಿ ಆರೋಗ್ಯ ಚೆನ್ನಾಗಿತ್ತು. ಲಸಿಕೆಯ ಎರಡನೇ ಡೋಸ್ ಪಡೆದ ಅರ್ಧ ಗಂಟೆಯಲ್ಲೇ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಮೃತಪಟ್ಟಿದ್ದಾರೆ. ಈ ಸಾವಿಗೆ ಕೋವಿಡ್ ಲಸಿಕೆ ಕಾರಣವೆಂಬ ಅನುಮಾನವಿದ್ದು, ಸೂಕ್ತ ತನಿಖೆ ನಡೆಸಬೇಕು’ ಎಂದು ಪತಿ ದಿನೇಶ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ‘ಕೋವಿಡ್ ಲಸಿಕೆ ಪಡೆದ ನಂತರ, ಅದರ ಪರಿಣಾಮದಿಂದ ಮಂಗಳಾ ಮೃತಪಟ್ಟಿದ್ದಾರೆಯೇ ಅಥವಾ ಬೇರೆ ಯಾವುದಾದರೂ ಕಾರಣಗಳಿಂದ ಸಾವು ಸಂಭವಿಸಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದರು.

'ಮಹಿಳೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಬೇಕಿದೆ. ಅದರ ವರದಿ ಬಂದ ನಂತರ ಮತ್ತಷ್ಟು ಮಾಹಿತಿ ದೊರೆಯಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.