ADVERTISEMENT

ಮೆಟ್ರೊ ನಿಲ್ದಾಣದಲ್ಲಿ ಮಹಿಳಾ ಚಾಲಿತ ಇ–ಆಟೊ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 22:48 IST
Last Updated 29 ಫೆಬ್ರುವರಿ 2024, 22:48 IST
ಬೆಂಗಳೂರಿನ ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಮಹಿಳಾ ಚಾಲಿತ ಇ–ಆಟೊ ಸೇವೆಗೆ ಚಾಲನೆ ನೀಡಲಾಯಿತು
ಬೆಂಗಳೂರಿನ ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಮಹಿಳಾ ಚಾಲಿತ ಇ–ಆಟೊ ಸೇವೆಗೆ ಚಾಲನೆ ನೀಡಲಾಯಿತು   

ಬೆಂಗಳೂರು: ನಗರದ ಯಲಚೇನಹಳ್ಳಿ ಮತ್ತು ಇಂದಿರಾ ನಗರದ ಮೆಟ್ರೊ ನಿಲ್ದಾಣದಲ್ಲಿ ಮಹಿಳೆಯರೇ ಓಡಿಸುವ ಇ–ಆಟೊ ಸೇವೆಗೆ ಬುಧವಾರ ಚಾಲನೆ ನೀಡಲಾಗಿದೆ.

ಆಲ್‌ ಸ್ಟಂ ಇಂಡಿಯಾದಿಂದ ಪ್ರಾಯೋಗಿಕವಾಗಿ 25 ವಿದ್ಯುತ್‌ ಚಾಲಿತ ಆಟೊಗಳ ಸೇವೆ ಆರಂಭಿಸಲಾಗಿದೆ. ಈ ಎರಡೂ ನಿಲ್ದಾಣಗಳ 4 ಕಿ.ಮೀ ವ್ಯಾಪ್ತಿಯಲ್ಲಿ ಇ–ಆಟೊ ಸೇವೆ ದೊರೆಯಲಿದೆ.

ಬೆಳಿಗ್ಗೆ 8ರಿಂದ ರಾತ್ರಿ 9ರ ವರೆಗೆ ಆಟೊಗಳು ಕಾರ್ಯ ನಿರ್ವಹಿಸಲಿವೆ. ಪ್ರಯಾಣಿಕರು ಮೆಟ್ರೊ ರೈಡ್‌ ಆ್ಯಪ್‌ ಮೂಲಕ ಸೇವೆಯನ್ನು ಕಾಯ್ದಿರಿಸಬಹುದಾಗಿದೆ. ಮೊದಲ 1.5 ಕಿ.ಮೀ.ವರೆಗೆ ಪ್ರಯಾಣ ದರವನ್ನು ₹15 ನಿಗದಿಪಡಿಸಲಾಗಿದೆ. 

ಮಹಿಳೆಯರ ರಕ್ಷಣೆಗೆ ಒತ್ತು:

‘ಮಹಿಳಾ ಪ್ರಯಾಣಿಕರ ಹಿತದೃಷ್ಟಿಯಿಂದ ಮಹಿಳೆಯರೇ ಓಡಿಸುವ ಆಟೊ ಸೇವೆ ಆರಂಭಿಸಲಾಗಿದೆ’ ಎಂದು ಆಲ್‌ ಸ್ಟಂ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್‌ ಲಾಯನ್ಸ್‌ ಹೇಳಿದರು.

ಆಲ್‌ ಸ್ಟಂ ಇಂಡಿಯಾ ಮತ್ತು ಡಬ್ಯ್ಲುಆರ್‌ಐ ಇಂಡಿಯಾ ಸಹಯೋಗದಡಿ ನಗರದ ಕನಕಪುರ ರಸ್ತೆಯಲ್ಲಿನ ಪ್ರೆಸ್ಟೀಜ್‌ ಶ್ರೀಹರಿ ಖೋಡೆ ಕೇಂದ್ರದಲ್ಲಿ ಆಯೋಜಿಸಿದ್ದ ಲೋ ಎಮಿಷನ್‌ ಆಕ್ಸೆಸ್‌ ಟು ಪಬ್ಲಿಕ್‌ ಟ್ರಾನ್ಸ್‌ಪೋರ್ಟ್‌ (ಎಲ್‌ಇಎಪಿ) ಕಾರ್ಯಕ್ರಮಕ್ಕೆ ಚಾಲನೆ ಅವರು ಮಾತನಾಡಿದರು.

ಹೆಣ್ಣುಮಕ್ಕಳೇ ಓಡಿಸುವ ಈ ಆಟೊದಿಂದ ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತಾ ಭಾವನೆ ಮೂಡಲಿದೆ ಎಂದರು.

ಸ್ಟೇಟ್‌ ಇನ್‌ಸ್ಟಿಟ್ಯೂಟ್‌ ಫಾರ್‌ ದಿ ಟ್ರಾನ್ಸ್‌ ಫಾರ್ಮೇಷನ್‌ ಆಫ್‌ ಕರ್ನಾಟಕದ ಉಪಾಧ್ಯಕ್ಷ ರಾಜೀವ್‌ ಗೌಡ ಮಾತನಾಡಿ, ಮಹಿಳಾ ಸಬಲೀಕರಣವೇ ರಾಜ್ಯದ ಸರ್ಕಾರದ ಗುರಿಯಾಗಿದೆ ಎಂದು ತಿಳಿಸಿದರು. 

ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್‌ನ (ಕನೆಕ್ಟಿವಿಟಿ ಆ್ಯಂಡ್‌ ಅಸೆಟ್‌ ಮ್ಯಾನೇಜ್‌ಮೆಂಟ್‌) ಕಾರ್ಯ ನಿರ್ವಾಹಕ ನಿರ್ದೇಶಕಿ ಕಲ್ಪನಾ ಕಟಾರಿಯಾ ಮಾತನಾಡಿ, ಕುಟುಂಬದ ಪೋಷಣೆಗಾಗಿ ಮಹಿಳೆಯರು ಮನೆಯಿಂದ ಹೊರಬಂದು ದುಡಿಯುತ್ತಿದ್ದಾರೆ. ಇಂತಹವರಿಗೆ ಕುಟುಂಬದ ಸದಸ್ಯರು ಅಗತ್ಯ ಸಹಕಾರ ನೀಡಿದರೆ ಯಶಸ್ವಿಯಾಗುತ್ತಾರೆ ಎಂದು ಸಲಹೆ ನೀಡಿದರು.

ಡಬ್ಯ್ಲುಆರ್‌ಐ ಇಂಡಿಯಾದ ಶ್ರೀನಿವಾಸ ಅಲವಳ್ಳಿ ಮಾತನಾಡಿ, ಆಲ್‌ ಸ್ಟಂ ಮತ್ತು ಮೆಟ್ರೊರೈಡ್‌ ಸಹಯೋಗದಡಿ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಕಡಿಮೆ ವೆಚ್ಚದಲ್ಲಿ ಆಟೊ ಸೇವೆ ಕಲ್ಪಿಸಲಾಗಿದೆ. ವಿದ್ಯುತ್‌ ಚಾಲಿತ ಆಟೊಗಳು ಪರಿಸರ ಮಾಲಿನ್ಯ ತಡೆಗೆ ಸಹಕಾರಿಯಾಗಿವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.