ADVERTISEMENT

ಕಾರು ತಡೆಯಲು ಯತ್ನಿಸಿ ಬಾನೆಟ್‌ ಮೇಲೆ ಬಿದ್ದ ವ್ಯಕ್ತಿಯನ್ನು ಎಳೆದೊಯ್ದ ಚಾಲಕಿ

ವೃದ್ಧನನ್ನು ರಸ್ತೆಯಲ್ಲಿ ಎಳೆದೊಯ್ದಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ 

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 22:05 IST
Last Updated 20 ಜನವರಿ 2023, 22:05 IST
ಕಾರಿನ ಬಾನೆಟ್‌ಗೆ ಸಿಲುಕಿರುವ ವ್ಯಕ್ತಿ
ಕಾರಿನ ಬಾನೆಟ್‌ಗೆ ಸಿಲುಕಿರುವ ವ್ಯಕ್ತಿ    

ಬೆಂಗಳೂರು: ಬಾನೆಟ್ ಮೇಲೆ ಎರಗಿದ್ದ ದರ್ಶನ್ ಎಂಬುವರನ್ನು ಕಾರಿನ ಮೇಲೆಯೇ 4 ಕಿ.ಮೀ.ವರೆಗೂ ಹೊತ್ತೊಯ್ದು ಕೊಲೆಗೆ ಯತ್ನಿಸಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪ್ರಿಯಾಂಕಾ ಎಂಬುವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಕಾರು ಚಾಲಕಿ ಪ್ರಿಯಾಂಕಾ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ದರ್ಶನ್ ಹಾಗೂ ಅವರ ಮೂವರು ಸ್ನೇಹಿತರನ್ನೂ ಪೊಲೀಸರು ಸೆರೆ ಹಿಡಿದಿದ್ದಾರೆ.

‘ಶುಕ್ರವಾರ ಬೆಳಿಗ್ಗೆ ನಡೆದಿರುವ ಘಟನೆ ಸಂಬಂಧ ದರ್ಶನ್ ಹಾಗೂ ಪ್ರಿಯಾಂಕಾ ಅವರ ಪತಿ ಪ್ರಮೋದ್, ದೂರು– ಪ್ರತಿದೂರು ನೀಡಿದ್ದಾರೆ. ಇದರನ್ವಯ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಘಟನೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ದರ್ಶನ್ ಅವರು ಪಾಪರೆಡ್ಡಿಪಾಳ್ಯದಲ್ಲಿ ರೆಸ್ಟೋರೆಂಟ್‌ ನಡೆಸುತ್ತಿದ್ದಾರೆ. ಅವರು ಮನೆಯಿಂದ ರೆಸ್ಟೋರೆಂಟ್‌ಗೆ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಹೊರಟಿದ್ದರು. ಪ್ರಿಯಾಂಕಾ ತಮ್ಮ ಪತಿ ಜೊತೆ ಆಸ್ಪತ್ರೆಯಿಂದ ಮನೆಗೆ ಟಾಟಾ ನೆಕ್ಸಾನ್ ಕಾರಿನಲ್ಲಿ ತೆರಳುತ್ತಿದ್ದರು’ ಎಂದು ತಿಳಿಸಿದರು.

ಸಾಯುತ್ತೇನೆಂದರೂ ಕಾರು ನಿಲ್ಲಿಸಲಿಲ್ಲ: ‘ಉಲ್ಲಾಳ ಮುಖ್ಯರಸ್ತೆಯ ಸಿಗ್ನಲ್‌ನಲ್ಲಿ ಕಾರು ನಿಲ್ಲಿಸಿದ್ದೆ. ಕೆಂಪು ಸಿಗ್ನಲ್‌ ಇದ್ದರೂ ಕಾರು ಚಲಾಯಿಸಿಕೊಂಡು ಬಂದಿದ್ದ ಪ್ರಿಯಾಂಕಾ, ನನ್ನ ಕಾರಿಗೆ ಅಡ್ಡವಾಗಿ ನಿಲ್ಲಿಸಿದ್ದರು. ಕೆಂಪು ಸಿಗ್ನಲ್ ಇರುವುದು ಕಾಣುವುದಿಲ್ಲವೇ ? ಎಂದು ಕೇಳಿದ್ದೆ. ಕೋಪಗೊಂಡ ಪ್ರಿಯಾಂಕಾ, ಮಧ್ಯದ ಬೆರಳು ತೋರಿಸಿ ಕಾರು ಚಲಾಯಿಸಿಕೊಂಡು ಮಂಗಳೂರು ಕಾಲೇಜು ಕಡೆ ಹೊರಟಿದ್ದರು’ ಎಂದು ದರ್ಶನ್ ದೂರಿನಲ್ಲಿ ತಿಳಿಸಿದ್ದಾರೆ.

‘ಆರೋಪಿ ಕಾರು ಹಿಂಬಾಲಿಸಿಕೊಂಡು ಹೋಗಿ, ಮಾರ್ಗ ಮಧ್ಯೆ ತಡೆದಿದ್ದೆ. ಅಷ್ಟರಲ್ಲೇ ಸ್ನೇಹಿತರೂ ಸ್ಥಳಕ್ಕೆ ಬಂದಿದ್ದರು. ಪ್ರಿಯಾಂಕಾ ಕಾರಿನಿಂದ ಇಳಿದಿರಲಿಲ್ಲ. ಅವರ ಜೊತೆಗಿದ್ದ ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ನನ್ನ ಮುಖಕ್ಕೆ ಗುದ್ದಿ, ಅಂಗಿ ಹರಿದ’

‘ಗಲಾಟೆ ಕಂಡು ಸಾರ್ವಜನಿಕರು ಸ್ಥಳದಲ್ಲಿ ಸೇರಿದ್ದರು. ಪೊಲೀಸರು ಸಹ ಸ್ಥಳಕ್ಕೆ ಬಂದಿದ್ದರು. ಇಬ್ಬರಿಗೂ ಠಾಣೆಗೆ ಬರುವಂತೆ ಹೇಳಿದ್ದರು. ಠಾಣೆಗೆ ಬರಲು ಒಪ್ಪದ ಪ್ರಿಯಾಂಕಾ ಹಾಗೂ ಇತರರು, ಕಾರು ಸಮೇತ ಸ್ಥಳದಿಂದ ಪರಾರಿಯಾಗಲು ಮುಂದಾದರು. ಅವರ ಕಾರು ಮುಂದಕ್ಕೆ ಹೋಗದಂತೆ ತಡೆಯಲು ಯತ್ನಿಸಿ, ಬಾನೆಟ್ ಮೇಲೆ ಎರಗಿದೆ. ಅದೇಸ್ಥಿತಿಯಲ್ಲೇ ಆರೋಪಿ ಪ್ರಿಯಾಂಕಾ, ಕಾರು ಚಲಾಯಿಸಿಕೊಂಡು ಹೊರಟರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಭಯವಾಗಿ ಕಿರುಚಾಡಿದೆ. ಕಾರು ನಿಲ್ಲಿಸಿ, ಇಲ್ಲದಿದ್ದರೆ ನಾನು ಸಾಯುತ್ತೇನೆಂದು ಗೋಳಾಡಿದೆ. ಕಾರು ನಿಲ್ಲಿಸದ ಅವರು ಅದೇಸ್ಥಿತಿಯಲ್ಲಿ 4 ಕಿ.ಮೀ.ವರೆಗೆ ಚಲಾಯಿಸಿದರು. ನನ್ನ ಸ್ಥಿತಿ ನೋಡಿದ ಕೆಲ ಯುವಕರು, ದ್ವಿಚಕ್ರ ವಾಹನದಲ್ಲಿ ಬೆನ್ನಟ್ಟಿ ಕಾರು ಅಡ್ಡಗಟ್ಟಿ ನನ್ನನ್ನು ರಕ್ಷಿಸಿದರು’ ಎಂದು ದರ್ಶನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತ್ನಿ ಬಟ್ಟೆ ಹಿಡಿದು ಎಳೆದಾಡಿದರು: ಪ್ರತಿ ದೂರು ನೀಡಿರುವ ಪ್ರಿಯಾಂಕಾ ಪತಿ ಪ್ರಮೋದ್, ‘ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಹೋಗಿ ವಾಪಸ್‌ ಮನೆಯತ್ತ ತೆರಳುತ್ತಿದ್ದೆವು. ಪತ್ನಿ ಕಾರು ಚಲಾಯಿಸುತ್ತಿದ್ದರು. ಉಲ್ಲಾಳ ಮುಖ್ಯರಸ್ತೆಯಲ್ಲಿ ಆರೋಪಿ ದರ್ಶನ್ ತಮ್ಮ ಕಾರು ಅಡ್ಡ ನಿಲ್ಲಿಸಿದ್ದರು. ಅದರ ಪಕ್ಕದ ಸ್ವಲ್ಪ ಜಾಗದಲ್ಲಿ ಪತ್ನಿ ಕಾರು ಚಲಾಯಿಸಿಕೊಂಡು ಮುಂದಕ್ಕೆ ಹೊರಟಿದ್ದರು. ದರ್ಶನ್, ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ. ಗಾಬರಿಗೊಂಡು ನಾವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಸ್ಥಳದಿಂದ ಹೊರಟೆವು’ ಎಂದಿದ್ದಾರೆ.

‘ಹಿಂಬಾಲಿಸಿಕೊಂಡು ಬಂದಿದ್ದ ದರ್ಶನ್ ಹಾಗೂ ಇತರರು, ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದರು. ಪತ್ನಿಯ ಬಟ್ಟೆ ಹಿಡಿದು ಎಳೆದಾಡಿದರು. ಕಾರಿನ ಗಾಜು ಒಡೆದರು. ಅಷ್ಟರಲ್ಲೇ ಪೊಲೀಸರು ಸ್ಥಳಕ್ಕೆ ಬಂದರು. ನಂತರ, ಕಾರು ಚಲಾಯಿಸಿಕೊಂಡು ಠಾಣೆಗೆ ಹೊರಟಿದ್ದೆವು. ಕಾರು ತಡೆದ ದರ್ಶನ್, ಬಾನೆಟ್ ಮೇಲೆ ಮಲಗಿದ್ದ. ಪಕ್ಕಕ್ಕೆ ಸರಿಯುವಂತೆ ಹೇಳಿದರೂ ಸರಿಯಲಿಲ್ಲ. ಭಯದಿಂದ ಪತ್ನಿ ಕಾರು ಚಲಾಯಿಸಿಕೊಂಡು ಠಾಣೆಯತ್ತ ಹೊರಟಿದ್ದರು. ಹಲವರು ನಮ್ಮನ್ನು ಹಿಂಬಾಲಿಸಿಕೊಂಡು ಬಂದು ಪುನಃ ಅಡ್ಡಗಟ್ಟಿ ಕಿರುಕುಳ ನೀಡಿದರು’ ಎಂದೂ ದೂರಿನಲ್ಲಿ ಪ್ರಮೋದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.