ADVERTISEMENT

ಪತಿಗೆ ₹20 ಲಕ್ಷ ಆಮಿಷವೊಡ್ಡಿ ಪ್ರಿಯಕರನ ಜತೆ ಪತ್ನಿ ಪರಾರಿ!

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 2:54 IST
Last Updated 27 ಫೆಬ್ರುವರಿ 2020, 2:54 IST
   

ಬೆಂಗಳೂರು: ಪತಿಗೆ ₹20 ಲಕ್ಷದ ಆಮಿಷವೊಡ್ಡಿ ಪ್ರಿಯಕರನ ಜತೆ ಪರಾರಿಯಾದ ಮಹಿಳೆ ಹಣವನ್ನೂ ಕೊಡದೆ, ವಿಚ್ಛೇದನಕ್ಕೂ ಅರ್ಜಿ ಸಲ್ಲಿಸದೆ ಸತಾಯಿಸುತ್ತಿದ್ದಾರೆ ಎನ್ನಲಾದ ಘಟನೆ ಬೊಮ್ಮನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಂಗಸಂದ್ರದ ಯಲ್ಲಾರೆಡ್ಡಿ ಎಂಬುವರು 2018ರ ಜುಲೈ 8ರಂದು ಮಹಿಳೆಯನ್ನು ಮದುವೆಯಾಗಿದ್ದರು. ಮದುವೆ ಬಳಿಕ ಮಹಿಳೆ ತಾನು ಶಿವು ಎಂಬಾತನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಹೋಗಲು ಅವಕಾಶ ನೀಡಿದರೆ ಮದುವೆ ಖರ್ಚುವೆಚ್ಚ ಸೇರಿದಂತೆ ₹20 ಲಕ್ಷ ಕೊಡುವುದಾಗಿ ಆಮಿಷವೊಡ್ಡಿದರು. ಈ ಬಗ್ಗೆ ಸಂಬಂಧಿಗಳಾದ ಆನಂದರೆಡ್ಡಿ ಮತ್ತು ಕೃಷ್ಣಾರೆಡ್ಡಿ ಸಮ್ಮುಖದಲ್ಲಿ ಮಾತುಕತೆ ನಡೆಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

‍ಒಪ್ಪಂದದಂತೆ ಮಹಿಳೆ ಪ್ರಿಯಕರನ ಜತೆ ಪಲಾಯನ ಮಾಡಿದರು. ಆದರೆ, ಇದುವರೆಗೂ ಆಕೆ ಹಣ ನೀಡಿಲ್ಲ. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿಲ್ಲ. ಇದೇ 23ರಂದು ತಮ್ಮ ಮನೆ ಮುಂದೆ ನಡೆದುಹೋಗುತ್ತಿದ್ದ ಕೃಷ್ಣಾರೆಡ್ಡಿ, ಆನಂದರೆಡ್ಡಿ ಅವರನ್ನು ಯಲ್ಲಾರೆಡ್ಡಿ ವಿಚಾರಿಸಿದಾಗ ಹಲ್ಲೆ ಮಾಡಿದರು. ‘ನಿನಗೆ ಕೊಡಬೇಕಾದ ಹಣದಲ್ಲಿ ₹2 ಲಕ್ಷವನ್ನು ಬೇರೆಯವರಿಗೆ ಕೊಟ್ಟರೆ ನಿನ್ನ ಕಥೆ ಮುಗಿಸುತ್ತಾರೆ ಎಂಬುದಾಗಿ ಪತ್ನಿ ಹೇಳಿರುವುದಾಗಿ ಬೆದರಿಕೆ ಹಾಕಿದರು’ ಎಂದು ಯಲ್ಲಾರೆಡ್ಡಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಉದ್ಯೋಗದ ಆಮಿಷ: ₹17.45 ಲಕ್ಷ ವಂಚನೆ

ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ₹ 17.45 ಲಕ್ಷ ಪಡೆದು ವಂಚಿಸಿದ ಆರೋಪದಲ್ಲಿ ಯಲಹಂಕ ನ್ಯೂ ಟೌನ್‌ ನಿವಾಸಿ ಸುಬ್ರಹ್ಮಣ್ಯ ಪ್ರಭು ಎಂಬಾತನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ವಂಚನೆಗೆ ಒಳಗಾದ ಬಸವನಗುಡಿಯ ಎಂ.ಆರ್‌. ನಿತಾನ್‌ ರಾಜ್‌ ಎಂಬುವವರು ಯಲಹಂಕ ಠಾಣೆಯಲ್ಲಿ ದೂರು ನೀಡಿದ್ದಾರೆ. ಉದ್ಯೋಗ ದೊರಕಿಸಿ ಕೊಡುವುದಾಗಿ ಹಣ ಪಡೆದ ಆರೋಪಿ, ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾನೆ ಎಂದೂ ದೂರಿನಲ್ಲಿ ಆರೋಪಿಸಿದ್ದಾರೆ.

ಪಾನಮತ್ತನಿಂದ ಹೆಡ್‌ ಕಾನ್‌ಸ್ಟೆಬಲ್‌ಗೆ ಹಲ್ಲೆ

ಪಾನಮತ್ತನಾಗಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ಮಾಡಿದ ಘಟನೆ ವರ್ತೂರು ಕಾಲೇಜು ಜಂಕ್ಷನ್‌ ಬಳಿ ನಡೆದಿದೆ.

ವರ್ತೂರು ಠಾಣೆಯ ವೈಟ್‌ಫೀಲ್ಡ್‌ ಸಂಚಾರ ವಿಭಾಗದ ಹೆಡ್‌ ಕಾನ್‌ಸ್ಟೆಬಲ್‌ ಎಸ್‌.ಜೆ. ಆನಂದ್‌ ಈ ಬಗ್ಗೆ ಎಲೆಕ್ಟ್ರಾನಿಕ್‌ ಸಿಟಿಯ ನಿವಾಸಿ ಆಕಾಶ್‌ ತ್ರಿಪಾಠಿ ವಿರುದ್ಧ ವರ್ತೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.