ಬೆಂಗಳೂರು: ‘ಮಹಿಳಾ ಸಬಲೀಕರಣಕ್ಕೆ ಶಕ್ತಿ, ಗೃಹಲಕ್ಷ್ಮಿಯಂತಹ ಯೋಜನೆಗಳು ಸಹಕಾರಿಯಾಗಿವೆ. ಸಮಸಮಾಜ ನಿರ್ಮಾಣ ಸಹಿಸದ ಕೆಲವರು, ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಿದ್ದಾರೆಂದು ಟೀಕಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಾಜ್ಯ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಾಂಸ್ಕೃತಿಕ ಪರಿಷತ್ತು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಹಾಗೂ ಸಂಘದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ, ಮಾತನಾಡಿದರು.
‘ಹೆಣ್ಣು ಮಕ್ಕಳು ಶಿಕ್ಷಿತರಾಗಿ, ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗಬೇಕು. ಈ ಕಾರಣಕ್ಕೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರತಿ ತಿಂಗಳು ₹2 ಸಾವಿರ ಒದಗಿಸಲಾಗುತ್ತಿದೆ. ಬಸ್‌ಗಳಲ್ಲಿ ಓಡಾಡುವುದರಿಂದ, ಉಚಿತ ಅಕ್ಕಿಯಿಂದ ಜನರು ಸೋಮಾರಿಗಳಾಗುತ್ತಾರಾ? ಅನುಭವದ ಆಧಾರದ ಮೇಲೆ ಉಚಿತ ಅಕ್ಕಿ ನೀಡುವ ಯೋಜನೆಯನ್ನು ಜಾರಿ ಮಾಡಿದ್ದೇನೆ. ಗೃಹಲಕ್ಷ್ಮಿ ಯೋಜನೆಯಡಿ 1.23 ಕೋಟಿ ಕುಟುಂಬಗಳ ಯಜಮಾನಿಗೆ ಪ್ರತಿ ತಿಂಗಳು ತಲಾ ₹ 2 ಸಾವಿರ ನೀಡುತ್ತಿದ್ದೇವೆ. ಇದು ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗಿದೆ’ ಎಂದರು.
‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಅಂಕಗಳ ಸಾಧನೆಯಲ್ಲಿ ಹೆಣ್ಣು ಮಕ್ಕಳೇ ಮುಂದಿದ್ದಾರೆ. ಸೇನೆ, ಅಂತರಿಕ್ಷ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದು ಮಹಿಳಾ ಕುಲದ ಪ್ರಗತಿಯ ಪ್ರತೀಕ’ ಎಂದು ಅಭಿಪ್ರಾಯಪಟ್ಟರು.
‘ಅಹಲ್ಯಾಬಾಯಿ ಅವರ ಹೆಸರಿನಲ್ಲಿ ಮಹಿಳಾ ವಸತಿ ನಿಲಯ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಜಾಗ ಒದಗಿಸಬೇಕು’ ಎಂಬ ಸಂಘದ ಅಧ್ಯಕ್ಷೆ ವಚನ ಕೆ.ಆರ್. ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ, ‘ಸಂಘಕ್ಕೆ ಬೆಂಗಳೂರಿನಲ್ಲಿ ಜಮೀನು ನೀಡುವ ಜತೆಗೆ ವಸತಿ ನಿಲಯ ನಿರ್ಮಾಣಕ್ಕೂ ಸಹಕಾರ ನೀಡಲಾಗುವುದು’ ಎಂದು ಭರವಸೆ ನೀಡಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ‘ಅಹಲ್ಯಾಬಾಯಿ ಹೋಳ್ಕರ್ ಅವರು ಮಹಿಳೆಯರ ಶಕ್ತಿ ಮತ್ತು ಧ್ವನಿಯಾಗಿದ್ದರು. ಅನೇಕ ಸಮಾಜ ಸುಧಾರಣಾ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದರು’ ಎಂದು ಸ್ಮರಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.