ಬೆಂಗಳೂರು: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಅಖಿಲ ಭಾರತ ಸಮಿತಿಯ ‘ಪ್ರತಿಭಟನಾ ಸಪ್ತಾಹ’ ಕರೆಯ ಮೇರೆಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಜಿಲ್ಲೆಗಳ ನೂರಾರು ಮಹಿಳೆಯರು, 'ಜಸ್ಟಿಸ್ ಫಾರ್ ಅಭಯ, ಮಹಿಳೆ ಮತ್ತು ಮಕ್ಕಳ ಮೇಲಿನ ಎಲ್ಲ ರೀತಿಯ ದೌರ್ಜನ್ಯಗಳನ್ನು ಕೊನೆಗೊಳಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಮತ್ತು ಅಸಂಘಟಿತ ಕಾರ್ಮಿಕರಿಗೆ ಗೌರವಯುತ ಜೀವನ ನಡೆಸಲು ಬೇಕಾದ ವೇತನ ಖಾತ್ರಿಪಡಿಸಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಶಿಕ್ಷಣದ ಕೋಮುವಾದೀಕರಣ ಹಾಗೂ ಖಾಸಗೀಕರಣವನ್ನು ನಿಲ್ಲಿಸಬೇಕು. ಹೆಣ್ಣು ಮಕ್ಕಳ ಮತ್ತು ಮಕ್ಕಳ ಸಾಗಾಣಿಕೆಯನ್ನು ನಿಲ್ಲಿಸಿ, ಮದ್ಯಪಾನ, ಮಾದಕ ವಸ್ತು ಹಾಗೂ ಅಶ್ಲೀಲ ಜಾಲತಾಣಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಎಸ್. ಶೋಭಾ ಮಾತನಾಡಿ, 'ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಸಮಾನ ವೇತನವನ್ನು ಖಾತ್ರಿಪಡಿಸಿ 'ಎಂಬ ಘೋಷವಾಕ್ಯದೊಂದಿಗೆ ‘ಸೆಪ್ಟೆಂಬರ್ 1 ರಿಂದ 7ರವರೆಗೆ ಪ್ರತಿಭಟನಾ ಸಪ್ತಾಹ ಆಚರಿಸಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಭದ್ರತೆ ಇಲ್ಲವಾಗಿದೆ. ಸ್ತ್ರೀ ಭ್ರೂಣ ಹತ್ಯೆ, ಬಾಲ್ಯ ವಿವಾಹ ಮುಂತಾದ ಪ್ರಕರಣಗಳು ಹೆಚ್ಚಾಗುತ್ತಿವೆ. ಹೆಣ್ಣು ಮಕ್ಕಳ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ, ಸ್ತ್ರೀ ಪರ ಎಂಬಂತೆ ಮೇಲ್ನೋಟಕ್ಕೆ ಸರ್ಕಾರಗಳು ಬಿಂಬಿಸಿಕೊಳ್ಳುತ್ತವೆ. ವಾಸ್ತವದಲ್ಲಿ ಯಾವುದೇ ಕಾಳಜಿ ಇರುವುದಿಲ್ಲ’ ಎಂದು ಆರೋಪಿಸಿದರು.
ಮಹಿಳೆಯರ ಮೇಲಿನ ಸಮಸ್ಯೆಗಳ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕು. ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಎಂಎಸ್ಎಸ್ ರಾಜ್ಯ ಸೆಕ್ರೆಟರಿಯೇಟ್ ಸದಸ್ಯೆ ಮಧುಲತಾ, ಕಾರ್ಯದರ್ಶಿ ಎ.ಶಾಂತಾ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.