ಬೆಂಗಳೂರು: ‘ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿರುವ ಮಹಿಳೆಯರನ್ನು ಸಂತೈಸುವ ಕೆಲಸವನ್ನು ರಾಜ್ಯ ಮಹಿಳಾ ಆಯೋಗಗಳು ಮಾಡಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ಹೇಳಿದರು.
ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸುರಾನ ಕಾಲೇಜು ವತಿಯಿಂದ ‘ಕೋವಿಡ್ ಸಂದರ್ಭದಲ್ಲಿ ಮಹಿಳಾ ಹಕ್ಕುಗಳ ರಕ್ಷಣೆ’ ವಿಷಯ ಕುರಿತು ನಡೆದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಕೋವಿಡ್ ಸಂದರ್ಭದಲ್ಲಿ ದವಸಧಾನ್ಯಗಳನ್ನು ತರಲು ಹೊರಹೋಗುವ ಮಹಿಳೆಯರಿಗೆ ಸರ್ಕಾರಗಳು ಭದ್ರತೆ ನೀಡುವ ಮೂಲಕ ಲೈಂಗಿಕ ಶೋಷಣೆ ತಡೆಗಟ್ಟಬೇಕು ಎಂದು ಜಮ್ಮು-ಕಾಶ್ಮೀರ ಹೈಕೋರ್ಟ್ ನೀಡಿರುವ ತೀರ್ಪು ಅನ್ನು ಎಲ್ಲ ರಾಜ್ಯಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು’ ಎಂದರು.
ಐಪಿಎಸ್ ಅಧಿಕಾರಿ ಡಿ. ರೂಪಾ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ. ಈ ಸನ್ನಿವೇಶವನ್ನು ಪುರುಷರು ದುರ್ಬಳಕೆ ಮಾಡಿಕೊಳ್ಳಬಾರದು’ ಎಂದು ಎಚ್ಚರಿಕೆ ನೀಡಿದರು. ಸಹಾಯಕ ಪೊಲೀಸ್ ಕಮಿಷನರ್ ರೀನಾ ಸುವರ್ಣ ಮಾತನಾಡಿ, ‘ಕೋವಿಡ್ ದೃಢಪಟ್ಟ ಮಹಿಳೆಯರಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ನೀಡದಿರುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.
ಎನ್ಎಸ್ಎಸ್ ಸಂಯೋಜನಾಧಿಕಾರಿ ಎನ್. ಸತೀಶ್ ಗೌಡ, ವಿದ್ಯಾವರ್ಧಕ ಕಾನೂನು ಕಾಲೇಜಿನ ನಿರ್ದೇಶಕ ಪ್ರೊ.ಕೆ.ಬಿ. ವಾಸುದೇವ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.