ADVERTISEMENT

Bengaluru: ‘ರಾಣಿ ಚನ್ನಮ್ಮ ಪಡೆ’ಗೆ ಚಾಲನೆ

ಸ್ವಯಂ ರಕ್ಷಣೆ ಕಲೆ ಕುರಿತು ಮಹಿಳಾ ಸಿಬ್ಬಂದಿ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:21 IST
Last Updated 27 ಸೆಪ್ಟೆಂಬರ್ 2025, 0:21 IST
ನಗರದ ಮಲ್ಲೇಶ್ವರ ಮೈದಾನದಲ್ಲಿ ಬೆಂಗಳೂರು ಉತ್ತರ ವಿಭಾಗದ ರಾಣಿ ಚನ್ನಮ್ಮ ಪಡೆ ಜಾಗೃತಿ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್ ಹಾಗೂ ನಟಿ ಸುಧಾರಾಣಿ   ಚಾಲನೆ ನೀಡಿದರು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ನಗರದ ಮಲ್ಲೇಶ್ವರ ಮೈದಾನದಲ್ಲಿ ಬೆಂಗಳೂರು ಉತ್ತರ ವಿಭಾಗದ ರಾಣಿ ಚನ್ನಮ್ಮ ಪಡೆ ಜಾಗೃತಿ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್ ಹಾಗೂ ನಟಿ ಸುಧಾರಾಣಿ   ಚಾಲನೆ ನೀಡಿದರು. ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಮಕ್ಕಳು– ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಹಾಗೂ ಅಪರಾಧ ನಿಯಂತ್ರಣಕ್ಕಾಗಿ ರಚಿಸಿರುವ ಉತ್ತರ ವಿಭಾಗದ ಮಹಿಳಾ ಪೊಲೀಸರ ‘ರಾಣಿ ಚನ್ನಮ್ಮ ಪಡೆ’ಗೆ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಮತ್ತು ನಟಿ ಸುಧಾರಾಣಿ ಚಾಲನೆ ನೀಡಿದರು.

ಮಲೇಶ್ವರ 18ನೇ ರಸ್ತೆಯ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 20 ಮಂದಿಯ ರಾಣಿ ಚನ್ನಮ್ಮ ಪಡೆಗೆ ಹಸಿರು ಬಾವುಟ ತೋರಿಸಿದರು. ಪೊಲೀಸ್ ಸಿಬ್ಬಂದಿ ದ್ವಿಚಕ್ರ ವಾಹನದಲ್ಲಿ ಮೈದಾನ ಒಂದು ಸುತ್ತು ಹಾಕಿ, ಜಾಗೃತಿ ಮೂಡಿಸಿದರು. ಇವರೊಂದಿಗೆ ಒನಕೆ ಓಬವ್ವ ಪಡೆಯ ಮಹಿಳಾ ಸಿಬ್ಬಂದಿ ಸಹ ಸಾಗಿದರು.

ಬಳಿಕ ಮಹಾರಾಣಿ ಲಕ್ಷ್ಮೀ ಅಮ್ಮಣಿ ಮಹಿಳಾ ಕಾಲೇಜಿನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆತ್ಮರಕ್ಷಣೆ ಹಾಗೂ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಲಾಯಿತು.

ಮಹಿಳೆಯರು ಅಪಾಯದಲ್ಲಿದ್ದ ಸಂದರ್ಭದಲ್ಲಿ ಸ್ವಯಂ ರಕ್ಷಣೆ ಕಲೆ ಬಳಸಿ ಪಾರಾಗುವುದರ ವಿಧಾನವನ್ನು ಪ್ರದರ್ಶಿಸಿದರು.  ಹೆಣ್ಣು ಮಕ್ಕಳನ್ನು ಚುಡಾಯಿಸುವಾಗ, ಚಿನ್ನದ ಸರ ಕಿತ್ತುಕೊಳ್ಳಲು ಯತ್ನಿಸುವಾಗ, ಅಸಭ್ಯ ವರ್ತನೆ ಹಾಗೂ ಚಾಕುವಿನಿಂದ ದಾಳಿ ಮಾಡಲು ಯತ್ನಿಸುವ ಸಂದರ್ಭದಲ್ಲಿ ಯಾವ ರೀತಿ ರಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ಮಹಿಳಾ ಸಿಬ್ಬಂದಿ ಗೌರಿ, ಶಿಲ್ಪಾ, ಅಶ್ವಿನಿ, ಕಾಂಚನಾ, ರುಕ್ಮಿಣಿ, ಗೀತಾ, ಪ್ರತಿಭಾ, ಶ್ರುತಿ, ನೇತ್ರಾ, ಶ್ರೀದೇವಿ ಪ್ರಾತ್ಯಕ್ಷಿಕೆ ನೀಡಿದರು.

ADVERTISEMENT

‘ಪ್ರತಿ ಠಾಣೆಯಲ್ಲೂ ಮೂರು ಮಹಿಳಾ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ನಿಯಂತ್ರಣ ಕೊಠಡಿ ಹಾಗೂ ಸುರಕ್ಷಾ ಆ್ಯಪ್‌ ಮೂಲಕ ತುರ್ತು ಕರೆ ಮಾಡುವ ಮಹಿಳೆಯರಿಗೆ ಪಡೆಯ ಸಿಬ್ಬಂದಿ ರಕ್ಷಣೆ ನೀಡುವರು. ಹೆಣ್ಣುಮಕ್ಕಳು ಹಾಗೂ ಮಹಿಳೆಯರಿಗೆ ಆತ್ಮರಕ್ಷಣೆ ಕಲಿಸುವುದು ಇದರ ಮುಖ್ಯ ಉದ್ದೇಶವಾಗಿದ್ದು, ಶಾಲಾ, ಕಾಲೇಜು, ಉದ್ಯಾನ ಬಳಿ ಈ ಪಡೆ ಗಸ್ತು ತಿರುಗುತ್ತದೆ. ಮಾದಕ ವಸ್ತು, ಸೈಬರ್ ಅಪರಾಧ ಕುರಿತು ಜಾಗೃತಿ ಮೂಡಿಸುತ್ತದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಮಾತನಾಡಿ, ‘ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಲು ಹಾಗೂ ಅಪರಾಧ ನಿಯಂತ್ರಣಕ್ಕೆ  ಕ್ರಮ ಕೈಗೊಳ್ಳಲಾಗುತ್ತಿದೆ. ಪಬ್ಲಿಕ್ ಔಟರೀಚ್‌ ಕಾರ್ಯಕ್ರಮದಡಿ ಶಾಲಾ, ಕಾಲೇಜಿನ ಆಸಕ್ತ ವಿದ್ಯಾರ್ಥಿನಿಯರಿಗೆ ಪಡೆಯ ಸದಸ್ಯೆಯರು ವಿಶೇಷ ಆತ್ಮರಕ್ಷಣೆ ಕಲೆಯ ಬಗ್ಗೆ ತರಬೇತಿ ನೀಡುವರು. ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧ ನಿಯಂತ್ರಿಸಲು ಹಾಗೂ  ಇಲಾಖೆಯಲ್ಲಿ ಸುಧಾರಣೆ ತರಲು ಈ ರೀತಿಯ ಕಾರ್ಯಕ್ರಮ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಹಾಗೂ ಸೈಬರ್‌ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಕಾಲೇಜುಗಳಲ್ಲಿ ಡ್ರಗ್ಸ್‌ ವಿರೋಧಿ ಸಮಿತಿ ರಚಿಸಬೇಕು. ಮಹಿಳೆಯರು ಮತ್ತು ಮಕ್ಕಳು ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಟಿ ಸುಧಾರಾಣಿ ಮಾತನಾಡಿ, ‘ಎಲ್ಲ ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡಿದ್ದಾಳೆ. ನಕಾರಾತ್ಮಕ ಅಂಶಗಳ ಎಚ್ಚರ ವಹಿಸಿ ಮುಂದೆ ಸಾಗಬೇಕು. ಮಹಿಳೆಯರನ್ನು ಪುರುಷರಿಗೆ ಹೋಲಿಕೆ ಮಾಡಿಕೊಳ್ಳಬಾರದು. ಸಾಮಾಜಿಕ ಜಾಲತಾಣವನ್ನು ಅಗತ್ಯವಿದಷ್ಟು ಮಾತ್ರ ಬಳಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಸಿ. ವಂಶಿ ಕೃಷ್ಣ, ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ, ಎಸಿಪಿಗಳಾದ ಕೃಷ್ಣಮೂರ್ತಿ, ತನ್ವಿರ್ ಹಾಗೂ ಪ್ರಾಂಶುಪಾಲರು ಹಾಜರಿದ್ದರು.

ವಾರದಲ್ಲಿ ಎರಡು ದಿನ ವಿಶೇಷ ಗಸ್ತು

ನಗರದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದ್ದು ವಾರದಲ್ಲಿ ಎರಡು ದಿನ ವಿಶೇಷ ಗಸ್ತು ನಡೆಸಲಾಗುವುದು ಎಂದು ಸೀಮಂತ್‌ಕುಮಾರ್ ಸಿಂಗ್ ತಿಳಿಸಿದರು.  ಸಾರ್ವಜನಿಕರಲ್ಲಿ ಸ್ಥೈರ್ಯ ಮೂಡಿಸಲು ನಗರದಾದ್ಯಂತ ಪೊಲೀಸರು ನಾಕಾಬಂದಿ ಹಾಕಿ ಪರಿಶೀಲಿಸುತ್ತಿದ್ದಾಗ ಮಾದಕ ವಸ್ತುಗಳು ಪತ್ತೆಯಾಗಿವೆ. ದಾಖಲೆ ಇಲ್ಲದ ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. ಜನಸ್ನೇಹಿಯಾಗಿ ಪೊಲೀಸ್ ವ್ಯವಸ್ಥೆ ಬಲಪಡಿಸಲು ಕ್ರಮ ವಹಿಸಲಾಗಿದೆ ಎಂದರು. ಅಪರಾಧ ವಿಭಾಗದ ಪೊಲೀಸರು ನಗರದಲ್ಲಿ ಹೆಚ್ಚು ನಾಕಾಬಂದಿ ಗಸ್ತು ಮಾಡಬೇಕು. ರಾತ್ರಿ ಗಸ್ತು ಹೊರತುಪಡಿಸಿ ಹೆಚ್ಚುವರಿಯಾಗಿ ವಿಶೇಷ ಗಸ್ತು ಮಾಡಬೇಕು. ಪ್ರತಿ ಮಂಗಳವಾರ ಹಾಗೂ ಗುರುವಾರ ಪೊಲೀಸ್ ಠಾಣಾ ವ್ಯಾಪ್ತಿಯ ಒಂದು ಪ್ರದೇಶವನ್ನು ರಾತ್ರಿ 9 ರಿಂದ 11 ಗಂಟೆಯ ಅಂತರದಲ್ಲಿ ತಪಾಸಣೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು. ಅದೇ ರೀತಿ ಪ್ರತಿ ಶುಕ್ರವಾರ ಹಾಗೂ ಶನಿವಾರ ಕಾಲ್ನಡಿಗೆಯಲ್ಲಿ ಅತಿ ಸೂಕ್ಷ್ಮ ಹಾಗೂ ಜನಸಂದಣಿ ಪ್ರದೇಶದಲ್ಲಿ ಗಸ್ತು ನಡೆಸುವರು. ಈ ಎಲ್ಲಾ ಚಟುವಟಿಕೆಗಳಲ್ಲಿ ಡಿಸಿಪಿಗಳು ಎಸಿಪಿಗಳು ಮತ್ತು ಇನ್‌ಸ್ಪೆಕ್ಟರ್‌ಗಳು ಭಾಗವಹಿಸುತ್ತಾರೆ. ಕಂಟ್ರೊಲ್ ರೂಮ್‌ಗೆ ಮಾಹಿತಿ ನೀಡುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.