ADVERTISEMENT

ಕಿರುಕುಳ: ಸ್ಯಾನಿಟೈಸರ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 12 ಮೇ 2022, 3:17 IST
Last Updated 12 ಮೇ 2022, 3:17 IST
   

ಬೆಂಗಳೂರು: ಗಂಡನ ಮನೆಯವರ ಹಿಂಸೆ ತಾಳಲಾರದೆ ಮುಖ ಹಾಗೂ ದೇಹದ ಮೇಲೆ ಸ್ಯಾನಿಟೈಸರ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ಮಹಿಳೆಯು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.

ಮೃತ ಮಹಿಳೆಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಆರ್‌.ಟಿ.ನಗರ ಠಾಣೆ ಪೊಲೀಸರು, ಆಕೆಯಪತಿ ಇಮ್ರಾನ್‌ ಹಾಗೂ ಆತನ ಸಹೋದರ ರಿಜ್ವಾನ್‌ನನ್ನು ಬಂಧಿಸಿದ್ದಾರೆ.

‘ಮಠದಹಳ್ಳಿ ನಿವಾಸಿ ಶಾಜಿಯಾ ಬಾನು ಮೃತ ಮಹಿಳೆ. ಶಾಜಿಯಾ ಹಾಗೂ ಇಮ್ರಾನ್‌ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದರು. ಏಪ್ರಿಲ್‌ 20ರಂದು ದಂಪತಿ ನಡುವೆ ಜಗಳ ನಡೆದಿತ್ತು. ಇದರಿಂದ ಮನನೊಂದಿದ್ದ ಶಾಜಿಯಾ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಬಳಿಕ ಸ್ಯಾನಿಟೈಸರ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ನೀನು ಕಪ್ಪಗಿದ್ದೀಯಾ ಎಂದು ಹೀಯಾಳಿಸಿ ಇಮ್ರಾನ್‌ ಹಾಗೂ ಆತನ ತಾಯಿ ನಮ್ಮ ಮಗಳಿಗೆ ಕಿರುಕುಳ ನೀಡಿದ್ದಾರೆ. ಮಕ್ಕಳನ್ನು ಮುಟ್ಟಲೂ ಆಕೆಗೆ ಬಿಡುತ್ತಿರಲಿಲ್ಲ. ಇದರಿಂದ ಮನನೊಂದು ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು’ ಎಂದು ಶಾಜಿಯಾ ಪೋಷಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.