
ಪೀಣ್ಯ ದಾಸರಹಳ್ಳಿ: 110 ಹಳ್ಳಿಗೆ ನೀರು ಒದಗಿಸುವ ಕಾವೇರಿ ಐದನೇ ಹಂತದ ಕುಡಿಯುವ ನೀರಿನ ಯೋಜನೆ ಕುಂಟುತ್ತಾ ಸಾಗುತ್ತಿದ್ದು, ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಶಾಸಕ ಎಸ್. ಮುನಿರಾಜು ಭೇಟಿ ನೀಡಿ ಪರಿಶೀಲಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಸಂದ್ರ, ಅಬ್ಬಿಗೆರೆ, ಶೆಟ್ಟಿಹಳ್ಳಿ, ಗೆಳೆಯರ ಬಳಗ, ಸಿಡೇದಹಳ್ಳಿ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಸಿದ್ದು ಶೀಘ್ರವಾಗಿ ಕಾವೇರಿ ಐದನೇ ಹಂತದ ಯೋಜನೆ ಮುಗಿದರೆ ನೀರಿನ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಸಬಹುದು. ವಾರಕ್ಕೆ ಒಮ್ಮೆಯಾದರೂ ನೀರು ಬಿಡುತ್ತಿಲ್ಲ, ಕೊಳವೆಬಾವಿ ಬತ್ತಿದ್ದು, ನೀರು ಬಿಟ್ಟರೆ ಅರ್ಧ ಸಂಪು ಕೂಡ ತುಂಬುವುದಿಲ್ಲ. ಟ್ಯಾಂಕರ್ ನೀರು ಬಳಸಬೇಕಾಗಿದೆ ಎಂದು ಸ್ಥಳೀಯರ ಗಮನ ಸೆಳೆದರು.
ಈಗಾಗಲೇ ಬೆಂಗಳೂರು ಜಲ ಮಂಡಳಿ ಅಧ್ಯಕ್ಷರು, ಮುಖ್ಯ ಎಂಜಿನಿಯರ್ ಕೂಡ ಆಗಮಿಸಿ ಪರಿಶೀಲಿಸಿ ಶೀಘ್ರ ಕಾಮಗಾರಿ ಮುಗಿಸುವಂತೆ ಸೂಚಿಸಿದ್ದರು. ಆದರೂ ಸಹ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ ಎಂದು ಸ್ಥಳೀಯರು ಹೇಳಿದರು.
‘ಈ ಹಿಂದಿನ ಹತ್ತು ವರ್ಷಗಳಲ್ಲಿ ಈ ತರಹ ನೀರಿನ ಸಮಸ್ಯೆ ಇರಲಿಲ್ಲ. ಏಳೆಂಟು ತಿಂಗಳಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಜಲ ಮಂಡಳಿ ಹಿರಿಯ ಅಧಿಕಾರಿಗಳು ಸಹ ಬಂದು ಸಮಸ್ಯೆ ಆಲಿಸಿದ್ದಾರೆ. ಶೀಘ್ರ ಕಾಮಗಾರಿ ಮುಗಿದರೆ ನೀರಿನ ಸಮಸ್ಯೆ ಬಗೆಹರಿಯುವುದು’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.