ADVERTISEMENT

ಹೈದರಾಬಾದ್– ದುಬೈ ಜಾಲ |₹ 158 ಕೋಟಿ ವಂಚನೆ: 11 ಆರೋಪಿಗಳ ಬಂಧನ

ಮನೆಯಿಂದ ಕೆಲಸದ ಆಮಿಷ - ಹಣ ಹೂಡಿಕೆ ಹೆಸರಿನಲ್ಲಿ ಮೋಸ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 15:05 IST
Last Updated 30 ಜನವರಿ 2024, 15:05 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ‘ಮನೆಯಿಂದ ಕೆಲಸ’ದ ಆಮಿಷವೊಡ್ಡಿ ಜನರನ್ನು ವಂಚಿಸುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಸೈಬರ್ ಕ್ರೈಂ ಪೊಲೀಸರು, 11 ಆರೋಪಿಗಳನ್ನು ಬಂಧಿಸಿದ್ದಾರೆ.

‘ವಂಚನೆ ಸಂಬಂಧ ವಿದ್ಯಾರಣ್ಯಪುರ ನಿವಾಸಿಯೊಬ್ಬರು ದೂರು ನೀಡಿದ್ದರು. ಆರೋಪಿಗಳಾದ ಅಮಿರ್ ಸುಹಾಲಿ, ಇನಾಯತ್ ಖಾನ್, ನಯಾಜ್ ಅಹಮ್ಮದ್, ಆದಿಲ್ ಆಗಾ, ಸಯ್ಯದ್ ಅಬ್ಬಾಸ್ ಅಲಿಖಾನ್, ಮಿಥುನ್ ಮನೀಶ್ ಷಾ, ನಯನಾ, ಸತೀಶ್, ಮೀರ್ ಶಶಿಕಾಂತ್ ಷಾ ಸೇರಿ 11 ಮಂದಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಕಮಿಷನರ್ ಬಿ. ದಯಾನಂದ್ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘₹60 ಲಕ್ಷ ಹಣವಿದ್ದ ಆರೋಪಿಗಳ ವಿವಿಧ ಬ್ಯಾಂಕ್‌ ಖಾತೆಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್‌, 2 ಲ್ಯಾಪ್​ಟಾಪ್, 15 ಸಿಮ್ ಕಾರ್ಡ್ ಹಾಗೂ ಮೂರು ಬ್ಯಾಂಕ್‌ಗಳ ಚೆಕ್‌ ಪುಸ್ತಕ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

30 ಖಾತೆಗಳಲ್ಲಿ 158 ಕೋಟಿ ವಹಿವಾಟು: ‘ಜನರನ್ನು ವಂಚಿಸುವ ಉದ್ದೇಶದಿಂದ ಆರೋಪಿಗಳು ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಬ್ಯಾಂಕ್‌ಗಳಲ್ಲಿ 30 ಖಾತೆಗಳನ್ನು ತೆರೆದಿದ್ದರು. ಇಂಥ ಖಾತೆಗಳಲ್ಲಿ ಇದುವರೆಗೂ ₹ 158 ಕೋಟಿ ವಹಿವಾಟು ಆಗಿದೆ. ಇದೆಲ್ಲವೂ ವಂಚನೆ ಹಣವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.

‘ಜಾಲದ ವಂಚನೆಗೆ ಸಂಬಂಧಪಟ್ಟಂತೆ ದೇಶದಲ್ಲಿ 2,143 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 265 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 135 ಎಫ್‌ಐಆರ್ ದಾಖಲಾಗಿವೆ. ಈ ಜಾಲವು ಹಲವು ವರ್ಷಗಳಿಂದ ಕೃತ್ಯ ಎಸಗಿದ್ದು, ಆರೋಪಿಗಳ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಸಿಸಿಬಿ ಸೈಬರ್ ಕ್ರೈಂ ಪೊಲೀಸರು, ನಿರಂತರವಾಗಿ ಮಾಹಿತಿ ಕಲೆಹಾಕಿ ಜಾಲ ಭೇದಿಸಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದಿಂದ ದುಬೈವರೆಗೂ ಜಾಲ ಹಬ್ಬಿದೆ’ ಎಂದು ಹೇಳಿದರು.

ಮಾನವ ಸಂಪನ್ಮೂಲ ಅಧಿಕಾರಿ:

‘ಆರೋಪಿ ಅಮಿರ್ ಸುಹಾಲಿ, ಮಾನವ ಸಂಪನ್ಮೂಲ ಅಧಿಕಾರಿ. ಜಾಲತಾಣ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡುತ್ತಿದ್ದ ಈತ, ತನ್ನನ್ನು ಸಂಪರ್ಕಿಸುತ್ತಿದ್ದ ಯುವಕ–ಯುವತಿಯರಿಗೆ ಕೆಲಸ ಕೊಡಿಸುವ ಆಮಿಷವೊಡುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಮತ್ತೊಬ್ಬ ಆರೋಪಿ ಮೀರ್ ಶಶಿಕಾಂತ್ ಷಾ, ಷೇರು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಇನಾಯತ್ ಖಾನ್, ಸರಕು ಸಾಗಣೆ ಕಂಪನಿಯ ಡೆಲಿವರಿ ಬಾಯ್. ನಯಾಜ್ ಅಹಮ್ಮದ್, ತರಕಾರಿ ವ್ಯಾಪಾರಿ. ಉಳಿದ ಆರೋಪಿಗಳು, ಷೇರು ವ್ಯವಹಾರ ಹಾಗೂ ಸ್ವಂತ ಉದ್ಯೋಗದಲ್ಲಿದ್ದರು’ ಎಂದು ತಿಳಿಸಿದರು.

ಯಾರದ್ದೊ ಹೆಸರಿನಲ್ಲಿ ಬ್ಯಾಂಕ್ ಖಾತೆ:

‘ಜನರ ಗಮನಕ್ಕೆ ಬಾರದಂತೆ ದಾಖಲೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಆರೋಪಿಗಳು, ಬ್ಯಾಂಕ್ ಖಾತೆ ತೆರೆಯುತ್ತಿದ್ದರು. ಸಿಮ್‌ ಕಾರ್ಡ್‌ಗಳನ್ನೂ ಖರೀದಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ದುಬೈವರೆಗೂ ಜಾಲ:

‘ಬ್ಯಾಂಕ್ ಪಾಸ್‌ ಪುಸ್ತಕ, ಚೆಕ್‌ ಪುಸ್ತಕ ಹಾಗೂ ಸಿಮ್‌ ಕಾರ್ಡ್‌ಗಳನ್ನು ಹೈದರಾಬಾದ್‌ನಿಂದ ಮುಂಬೈಗೆ ಬಸ್‌ನಲ್ಲಿ ಕಳುಹಿಸಲಾಗುತ್ತಿತ್ತು. ಮುಂಬೈನಿಂದ ದುಬೈಗೆ ವಿಮಾನ ಹಾಗೂ ಹಡಗು ಮೂಲಕ ಸಾಗಿಸಲಾಗುತ್ತಿತ್ತು. ಅದೇ ದಾಖಲೆಗಳನ್ನು ಪಡೆಯುತ್ತಿದ್ದ ದುಬೈನಲ್ಲಿದ್ದ ಆರೋಪಿಗಳು, ವಂಚನೆಗೆ ಬಳಸುತ್ತಿದ್ದರು’ ಎಂದು ತಿಳಿಸಿದರು.

ಜಾಹೀರಾತು ನೀಡಿ ವಂಚನೆ:

‘ಮನೆಯಿಂದ ಕೆಲಸ ಮಾಡಿ, ಕೈ ತುಂಬ ಹಣ ಗಳಿಸಿ’ ಎಂಬುದಾಗಿ ಜಾಹೀರಾತು ನೀಡುತ್ತಿದ್ದ ಆರೋಪಿಗಳು, ಹೂಡಿಕೆ ಹೆಸರಿನಲ್ಲಿ ಹಣ ಪಡೆಯುತ್ತಿದ್ದರು. ಮೊದಲೇ ಸೃಷ್ಟಿಸಿದ್ದ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಬಂಧಿತ ಆರೋಪಿಗಳು, ಮದ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು. ಅದಕ್ಕಾಗಿ ಕಮಿಷನ್ ಪಡೆಯುತ್ತಿದ್ದರು. ಜಾಲದ ಪ್ರಮುಖ ರೂವಾರಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.