ADVERTISEMENT

ಕೆಲಸ ಕೊಟ್ಟ ಮಾಲೀಕನಿಗೇ ಇರಿದ ಕಾರ್ಮಿಕ! ಕುಂಬಳಗೋಡು ಸೂಲಿಕೆರೆಯಲ್ಲಿ ಘಟನೆ

ಚಿನ್ನದ ಆಸೆಗೆ ಕೃತ್ಯ, ಕುಂಬಳಗೋಡು ಠಾಣಾ ವ್ಯಾಪ್ತಿಯ ಸೂಲಿಕೆರೆಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 0:17 IST
Last Updated 16 ನವೆಂಬರ್ 2025, 0:17 IST
ಆರೋಪಿ ಜಯಂತ್‌
ಆರೋಪಿ ಜಯಂತ್‌   

ಬೆಂಗಳೂರು: ಕೆಲಸ ನೀಡಿದ್ದ ಮಾಲೀಕನಿಗೆ ಚಾಕುವಿನಿಂದ ಇರಿದು ಚಿನ್ನದ ಸರ ದೋಚಿ ಪರಾರಿ ಆಗಿರುವ ಆರೋಪಿ ವಿರುದ್ಧ ಕುಂಬಳಗೋಡು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗಣೇಶ ಮೂರ್ತಿ ತಯಾರಿಸುವ ಕಾರ್ಖಾನೆ ಮಾಲೀಕ ಅಮರ್ ನಾರಾಯಣಸ್ವಾಮಿ ಅವರು ಇರಿತಕ್ಕೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಂತ್‌ (23) ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ. 

‘ಕಡಿಮೆ ಬೆಲೆಗೆ ನಿವೇಶನಗಳು ಮಾರಾಟಕ್ಕಿದ್ದು, ಅವುಗಳನ್ನು ತೋರಿಸುವುದಾಗಿ ಕಾರ್ಖಾನೆ ಮಾಲೀಕರನ್ನು ನಂಬಿಸಿ ಕರೆದೊಯ್ದು ಮಾರ್ಗ ಮಧ್ಯೆ ಆರೋಪಿ ಕೃತ್ಯ ಎಸಗಿದ್ದ. ಅಮರ್ ಅವರ ಕುತ್ತಿಗೆಯಲ್ಲಿದ್ದ 100 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡು ಪರಾರಿ ಆಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ADVERTISEMENT

ಗಾಯಾಳು ಹೇಳಿಕೆ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಕಾರ್ಖಾನೆಯಲ್ಲೇ ಕೆಲಸ ಮಾಡುತ್ತಿದ್ದ ಆರೋಪಿ: ‘ಅಮರ್‌ ಮಾಲೀಕತ್ವದ ಕಾರ್ಖಾನೆಯಲ್ಲಿ ಆರೋಪಿ ಕೆಲವು ತಿಂಗಳಿಂದ ಕೆಲಸ ಮಾಡುತ್ತಿದ್ದ. ಈ ನಡುವೆ ಏಕಾಏಕಿ ಕೆಲಸ ಬಿಟ್ಟು ಹೋಗಿದ್ದ. ನ.13ರಂದು ಮಧ್ಯಾಹ್ನ ಕಾರ್ಖಾನೆಗೆ ಬಂದು ಎರಡು ಬಿಡಿಎ ನಿವೇಶನಗಳು ಕಡಿಮೆ ಬೆಲೆಗೆ ಮಾರಾಟಕ್ಕಿವೆ. ಅವುಗಳನ್ನು ನೋಡಲು ಹೋಗೋಣ ಎಂದು ಹೇಳಿದ್ದ. ಇದನ್ನು ನಂಬಿದ್ದ ಅಮರ್, ಆರೋಪಿಯೊಂದಿಗೆ ಕಾರಿನಲ್ಲಿ ತೆರಳಿದ್ದರು. ಖಾಲಿ ಜಾಗವೊಂದಕ್ಕೆ ಕರೆದೊಯ್ದು ಮಾರಾಟಕ್ಕಿರುವ ನಿವೇಶನ ಎಂಬುದಾಗಿ ನಂಬಿಸಿದ್ದ’ ಎಂದು ಪೊಲೀಸರು ಹೇಳಿದರು.

‘ವಾಪಸ್ ಬರುವಾಗ ಕಾರಿನ ಹಿಂಭಾಗದ ಸೀಟ್‌ನಲ್ಲಿ ಕುಳಿತಿದ್ದ ಆರೋಪಿಯು ಅಮರ್‌ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಳ್ಳಲು ಪ್ರಯತ್ನಿಸಿದ್ದ. ಅಮರ್​ ಪ್ರತಿರೋಧ ತೋರಿದಾಗ ಚಾಕುವಿನಿಂದ ಬೆನ್ನು, ಕುತ್ತಿಗೆಗೆ ಇರಿದು ಗಾಯಗೊಳಿಸಿದ್ದ. ಬಳಿಕ ಕಾರಿನಿಂದ ದೂರುದಾರರು ಇಳಿದು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದರು. ಆಗ ಅವರನ್ನು ಹಿಂಬಾಲಿಸಿ ಸರ ಕಸಿದುಕೊಂಡು ಪರಾರಿ ಆಗಿದ್ದಾನೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.