ಬೆಂಗಳೂರು: ‘ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ, ಉತ್ತಮ ವಾತಾವರಣ ಇರಬೇಕು ಎನ್ನುವ ಕಾರಣದಿಂದಲೇ ಕಾನೂನು ರೂಪಿಸಲಾಗಿದ್ದು, ಹೆದರಿಕೆ, ಸಂಕೋಚಗಳಿಗೆ ಒಳಗಾಗದೆ ತೊಂದರೆಗೆ ಒಳಗಾದವರು ದೂರು ದಾಖಲಿಸಬೇಕು’ ಎಂದು ಎಂದು ವಕೀಲರಾದ ವಸಂತ ಕವಿತಾ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಲಿಂಗ ಆಧಾರಿತ ಹಿಂಸೆ ಮತ್ತು ಲಿಂಗ ಸಂವೇದನಾ ಕೋಶ ಆಯೋಜಿಸಿದ್ದ 'ಲಿಂಗ ಸಂವೇದನೆ ಹಾಗೂ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಕೇಂದ್ರ ಸರ್ಕಾರ 2013ರಲ್ಲಿಈ ಕಾಯ್ದೆ ಜಾರಿಗೆ ತಂದಿದೆ. ಜತೆಗೆ ಆಂತರಿಕ ದೂರು ಸಮಿತಿ ರಚನೆ ಕುರಿತು ಗಂಭೀರ ಕ್ರಮಗಳನ್ನು ಕೈಗೊಂಡಿದೆ. ಸಮಿತಿಯು ಒತ್ತಡಗಳಿಗೆ ಒಳಗಾಗದೇ ಕಾರ್ಯ ನಿರ್ವಹಿಸುತ್ತದೆ’ ಎಂದರು.
‘ಲೈಂಗಿಕ ಕಿರುಕುಳ, ಅಶ್ಲೀಲ ನಡುವಳಿಕೆಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಡೆದರೆ ಆಂತರಿಕ ದೂರು ಸಮಿತಿ ಗಮನಕ್ಕೆ ತರಬೇಕಾಗುತ್ತದೆ. ಸಮಿತಿಯು ಯಾವುದೇ ಹಂತದ ಅಧಿಕಾರಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತದೆ’ ಎಂದು ತಿಳಿಸಿದರು.
ಕೋಶದ ನೋಡಲ್ ಅಧಿಕಾರಿ ಬಿ.ಶೈಲಶ್ರೀ ಮಾತನಾಡಿ, ‘ಬೆಂಗಳೂರು ವಿ.ವಿ ವ್ಯಾಪ್ತಿಯಲ್ಲಿ ಯಾವುದೇ ಲೈಂಗಿಕ ಕಿರುಕುಳ ಪ್ರಕರಣ ನಡೆದರೆ ‘ಶೀ ಬಾಕ್ಸ್’ ಮೂಲಕ ದೂರನ್ನು ದಾಖಲಿಸಬಹುದು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು’ ಎಂದರು.
ಕೋಶದ ಸದಸ್ಯರಾದ ಬಿ.ಎಲ್.ಮುರುಳಿಧರ, ಶೋಭಾ ಎಂ. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.