
ಬೆಂಗಳೂರು: ವಿಶ್ವ ಏಡ್ಸ್ ದಿನದ ಪ್ರಯುಕ್ತ ರಾಜಾಜಿನಗರದ ಇ.ಎಸ್.ಐ.ಸಿ. ವೈದ್ಯಕೀಯ ಕಾಲೇಜು, ನಗರದಲ್ಲಿ ಎಚ್‌ಐವಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿತು.
‘ಎಚ್ಐವಿ ಪೀಡಿತರನ್ನು ನಿರ್ಲಕ್ಷ್ಯ ಮಾಡಿ ತುಚ್ಛವಾಗಿ ನೋಡುವ ಬದಲು ಅವರೂ ಸಮಾಜದಲ್ಲಿ ಒಬ್ಬರು ಎಂದು ಭಾವಿಸಿ, ಧೈರ್ಯ ತುಂಬಬೇಕು. ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಬೇಕು. ಪ್ರತಿಯೊಬ್ಬರೂ ಎಚ್‌ಐವಿ ಸೋಂಕಿನ ಬಗ್ಗೆ ತಿಳಿದಿರಬೇಕು. ಸಮುದಾಯದಲ್ಲೂ ಜಾಗೃತಿ ಮೂಡಿಸಬೇಕು. ಎಚ್ಐವಿ ಸೋಂಕಿತ ವ್ಯಕ್ತಿಗಳಿಗೆ ತೋರುವ ತಾರತಮ್ಯ ಹೋಗಲಾಡಿಸಬೇಕು’ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಪಟ್ಟರು.
‘ಎಚ್‍ಐವಿ ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ವೈರಾಣು. ಅಸುರಕ್ಷಿತ ಲೈಂಗಿಕ ಸಂಬಂಧ, ಎಚ್‌ಐವಿ ಸೋಂಕಿತರ ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವುದು, ಸೋಂಕಿತ ತಾಯಿಯಿಂದ ಗರ್ಭಾವಸ್ಥೆಯಲ್ಲಿರುವ ಮಗುವಿಗೆ ಸೋಂಕು ಹರಡುತ್ತದೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದರು.
‘ಎಚ್‌ಐವಿ ಸೋಂಕು ತಡೆಗೆ ಮುಂಜಾಗ್ರತೆಯೇ ಔಷಧ. ಆದ್ದರಿಂದ ಶಿಕ್ಷಣದ ಮೂಲಕ ಸಮುದಾಯದ ಪ್ರತಿಯೊಬ್ಬರಿಗೂ ಅರಿವು ಮೂಡಿಸಬೇಕು’ ಎಂದು ಹೇಳಿದರು.
ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಜಿತೇಂದ್ರ ಕುಮಾರ್, ವೈದ್ಯಕೀಯ ಅಧೀಕ್ಷಕ ಡಾ.ಸಿ.ಜಿ.ಎಸ್. ಪ್ರಸಾದ್, ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ. ಗಿರೀಶ್ ಎಂ.ಎಸ್., ಚರ್ಮರೋಗ ವಿಭಾಗಾಧಿಕಾರಿ ಡಾ. ರಘುನಾಥ, ಸಮುದಾಯ ವೈದ್ಯಕೀಯ ವಿಭಾಗಾಧಿಕಾರಿ ಡಾ. ಸುರೇಶ್ ಕುಮಾರ್ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವೈದ್ಯಕೀಯ ವಿದ್ಯಾರ್ಥಿಗಳು ಜನಜಾಗೃತಿ ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.