ಮರೆವು ಕಾಯಿಲೆ
ಬೆಂಗಳೂರು: ವಿಶ್ವ ಅಲ್ಝೈಮರ್ (ಮರೆವು ಕಾಯಿಲೆ) ಮಾಸಿಕದ ಪ್ರಯುಕ್ತ ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317ಎಫ್ ಇದೇ 27ರಂದು ಬೆಳಿಗ್ಗೆ 6.45ರಿಂದ ವಾಕಥಾನ್ ಹಮ್ಮಿಕೊಂಡಿದ್ದು, ಮರೆವು ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಯೋಜಕಿ (ಮಾನಸಿಕ ಆರೋಗ್ಯ) ಜಿ. ಅನುಪಮಾ, ‘ಈ ವಾಕಥಾನ್ ಸ್ವಾತಂತ್ರ್ಯ ಉದ್ಯಾನದಿಂದ ವಿಧಾನಸೌಧದವರೆಗೆ ನಡೆಯಲಿದೆ. ವೈದ್ಯಕೀಯ ಹಾಗೂ ಶಿಕ್ಷಣ ತಜ್ಞರು ವಾಕಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ರೋಗದ ಬಗ್ಗೆ ಜಾಗೃತಿ ಮೂಡಿಸಿ, ತಪ್ಪು ಕಲ್ಪನೆಯನ್ನು ಹೋಗಲಾಡಿಸಬೇಕು. ಈ ಕಾಯಿಲೆ ಎದುರಿಸುತ್ತಿರುವವರಿಗೆ ಸಹಾನುಭೂತಿಯ ಆರೈಕೆ ಅಗತ್ಯ’ ಎಂದು ಹೇಳಿದರು.
‘ದಿನನಿತ್ಯದ ಜೀವನದಲ್ಲಿ ನೆನಪಿನ ಶಕ್ತಿ ಕಡಿಮೆಯಾಗುವುದು, ಸ್ಥಳ ಮತ್ತು ಸಮಯದ ಬಗ್ಗೆ ಗೊಂದಲ, ವಸ್ತುಗಳನ್ನು ಎಲ್ಲೆಂದರಲ್ಲಿ ಇಡುವುದು, ದೃಶ್ಯಗಳು ಹಾಗೂ ಚಿತ್ರಗಳನ್ನು ಗುರುತಿಸುವಲ್ಲಿ ವಿಫಲರಾಗುವುದು ಸೇರಿ ವಿವಿಧ ಲಕ್ಷಣಗಳನ್ನು ಈ ಕಾಯಿಲೆಗೆ ಒಳಗಾದವರು ಎದುರಿಸುತ್ತಾರೆ’ ಎಂದು ತಿಳಿಸಿದರು.
‘ಸಕ್ರಿಯವಾಗಿದ್ದಲ್ಲಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಸಮುದಾಯದ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದು, ನಿಯಮಿತ ವ್ಯಾಯಾಮ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು, ಆರೋಗ್ಯಕರ ಆಹಾರ ಪದ್ಧತಿ ಸೇರಿ ವಿವಿಧ ಕ್ರಮಗಳಿಂದ ರೋಗದ ಅಪಾಯ ಕಡಿಮೆ ಮಾಡಬಹುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.