ADVERTISEMENT

‘ಸಂಧಿವಾತ: ಯುವಜನರಲ್ಲಿಯೂ ಸಮಸ್ಯೆ’: ವಿಶ್ವ ಸಂಧಿವಾತ ದಿನದ ಕಾರ್ಯಕ್ರಮ

ವಿಶ್ವ ಸಂಧಿವಾತ ದಿನದ ಕಾರ್ಯಕ್ರಮದಲ್ಲಿ ನಗರದ ಮೂಳೆ ತಜ್ಞರು ಕಳವಳ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 16:47 IST
Last Updated 20 ಅಕ್ಟೋಬರ್ 2021, 16:47 IST
ಕಾರ್ಯಕ್ರಮದಲ್ಲಿ (ಎಡದಿಂದ ಬಲಕ್ಕೆ) ಡಾ. ಸೈಯದ್‌ ಇಮ್ರಾನ್‌, ಡಾ. ಚಿರಾಗ್ ಥಾನ್ಸೆ ಹಾಗೂ ಡಾ.ಬಿ.ಜಿ. ಧರ್ಮಾನಂದ್ ಸಮಾಲೋಚನೆ ನಡೆಸಿದರು – ಪ್ರಜಾವಾಣಿ ಚಿತ್ರ 
ಕಾರ್ಯಕ್ರಮದಲ್ಲಿ (ಎಡದಿಂದ ಬಲಕ್ಕೆ) ಡಾ. ಸೈಯದ್‌ ಇಮ್ರಾನ್‌, ಡಾ. ಚಿರಾಗ್ ಥಾನ್ಸೆ ಹಾಗೂ ಡಾ.ಬಿ.ಜಿ. ಧರ್ಮಾನಂದ್ ಸಮಾಲೋಚನೆ ನಡೆಸಿದರು – ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಬದಲಾದ ಜೀವನಶೈಲಿ, ಪಾಶ್ಚಿಮಾತ್ಯ ಆಹಾರ ಪದ್ಧತಿ, ಧೂಮಪಾನದಂತಹ ವ್ಯಸನ ಸೇರಿದಂತೆ ವಿವಿಧ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ಯುವಜನರಲ್ಲಿಯೂ ಸಂಧಿವಾತದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದನ್ನು ಕಡೆಗಣಿಸಿದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದು ನಗರದ ಮೂಳೆ ತಜ್ಞರು ಎಚ್ಚರಿಸಿದರು.

ವಿಶ್ವ ಸಂಧಿವಾತ ದಿನದ ಅಂಗವಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಸಹಯೋಗದಲ್ಲಿ ಮಣಿಪಾಲ್‌ ಆಸ್ಪತ್ರೆಗಳ ಸಮೂಹದಅಂಗ ಸಂಸ್ಥೆಯಾದ ವಿಕ್ರಮ್ ಆಸ್ಪತ್ರೆಯು ನಗರದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ‘ಸಂಧಿವಾತ ಮತ್ತು ಕೀಲು ನೋವಿನ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು’ ಎಂಬ ವಿಷಯದ ಕುರಿತು ವೈದ್ಯರು ಚರ್ಚಿಸಿದರು.

ವಿಕ್ರಮ್ ಆಸ್ಪತ್ರೆಯ ಮೂಳೆ ತಜ್ಞ ಡಾ. ಚಿರಾಗ್ ಥಾನ್ಸೆ, ‘ಇತ್ತೀಚಿನ ದಿನಗಳಲ್ಲಿ ಸಂಧಿವಾತ ದೊಡ್ಡ ಅನಾರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ದೇಶದಲ್ಲಿ ಈ ಸಮಸ್ಯೆ ಎದುರಿಸುತ್ತಿರುವವ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹಿಂದೆ ಈ ಸಮಸ್ಯೆ ಹಿರಿಯ ನಾಗರಿಕರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈಗ ಯುವಜನರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಬದಲಾದ ಜೀವನಶೈಲಿಯೇ ಇದಕ್ಕೆ ಮುಖ್ಯ ಕಾರಣ’ ಎಂದು ಹೇಳಿದರು.

ADVERTISEMENT

ತಪಾಸಣೆಯಿಂದ ಪತ್ತೆ: ಸಂಧಿವಾತ ಸಮಾಲೋಚಕ ಡಾ.ಬಿ.ಜಿ. ಧರ್ಮಾನಂದ್, ‘ಸಾಮಾನ್ಯವಾಗಿ ಎರಡು ರೀತಿಯಲ್ಲಿ ಸಂಧಿವಾತ ಕಂಡುಬರುತ್ತದೆ. ಮೂಳೆಗಳು ಕ್ಷೀಣಗೊಳ್ಳುವ ಸಂಧಿವಾತ ಕೆಲವರಲ್ಲಿ ಕಾಣಿಸಿಕೊಂಡರೆ, ಇನ್ನೂ ಕೆಲವರ ಕೀಲುಗಳಲ್ಲಿ ಊರಿಯೂತ, ಕುಳಿತುಕೊಳ್ಳಲು ಕಷ್ಟವಾಗುವಂತಹ ಅಸಹಜ ಸ್ಥಿತಿ ಎದುರಾಗುತ್ತದೆ. ಚಲಿಸುವಾಗ ಬೆರಳುಗಳ ಕೊನೆಯಲ್ಲಿಬಿಗಿತ ಅಥವಾ ನೋವು ಕಂಡುಬರುವುದು ಇದರ ಮೊದಲ ಲಕ್ಷಣ. ವೈದ್ಯರನ್ನು ಸಂಪರ್ಕಿಸಿ, ತಪಾಸಣೆಗೆ ಒಳಗಾಗಬೇಕು’ ಎಂದರು.

ಮೂಳೆ ತಜ್ಞ ಡಾ. ಸೈಯದ್‌ ಇಮ್ರಾನ್‌, ‘ಸಂಧಿವಾತದ ಸಮಸ್ಯೆ ಇರುವವರು ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ.ಸಂಧಿವಾತದ ಲಕ್ಷಣಗಳು ಕಾಣಿಸಿಕೊಳ್ಳುತ್ತಲೇ ಗುರುತಿಸಿದಲ್ಲಿಇದನ್ನು ಗುಣಪಡಿಸಬಹುದು. ಇದು ತೀವ್ರ ಸ್ವರೂಪಕ್ಕೆ ತಿರುಗಿದರೆ ಮಂಡಿ ಚಿಪ್ಪು ಬದಲಿಸಬೇಕಾಗುತ್ತದೆ. ಎಲ್ಲ ವಯೋಮಾನದವರಿಗೂ ಮಂಡಿ ಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ನಡೆಸಬಹುದು. ವಿದೇಶಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.