ADVERTISEMENT

ವಿಶ್ವ ಪರಿಸರ ದಿನ ಆಚರಣೆ: ಉದ್ಯಾನ ನಗರಿಯ ಭೂಮಡಿಲು ತುಂಬಿದ ಸಸಿಗಳು

ನಗರದ ವಿವಿಧೆಡೆ ಸಂಘ ಸಂಸ್ಥೆಗಳಿಂದ ಸಸಿ ನಾಟಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 6:14 IST
Last Updated 6 ಜೂನ್ 2021, 6:14 IST
ವಿಶ್ವ ಪರಿಸರ ದಿನ...‌ನಗರದ ಕಬ್ಬನ್ ಉದ್ಯಾನದ ದಟ್ಟ ಹಸಿರಿನ ನಡುವೆ ಸ್ವಚ್ಛಂದವಾಗಿ ಹಾರಾಡಿದ ಪಾರಿವಾಳಗಳು -ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್
ವಿಶ್ವ ಪರಿಸರ ದಿನ...‌ನಗರದ ಕಬ್ಬನ್ ಉದ್ಯಾನದ ದಟ್ಟ ಹಸಿರಿನ ನಡುವೆ ಸ್ವಚ್ಛಂದವಾಗಿ ಹಾರಾಡಿದ ಪಾರಿವಾಳಗಳು -ಪ್ರಜಾವಾಣಿ ಚಿತ್ರ/ಎಂ.ಎಸ್.ಮಂಜುನಾಥ್   

ಬೆಂಗಳೂರು:ವಿಶ್ವ ಪರಿಸರ ದಿನದ ಅಂಗವಾಗಿ ವಿವಿಧ ಸಂಘ ಸಂಸ್ಥೆಗಳುನಗರದ ಹಲವೆಡೆ ಶನಿವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡವು. ಉದ್ಯಾನ ನಗರಿಯ ಭೂಮಡಿಲಿಗೆ ಹಸಿರುಡುಗೆ ತೊಡಿಸುವ ಕಾರ್ಯ ಭರದಿಂದ ನಡೆಯಿತು. ಈ ಸಸಿಗಳಿಗೆ ಮಧ್ಯಾಹ್ನ ಮಳೆಯ ಸಿಂಚನವೂ ಆಯಿತು.

ಕೋವಿಡ್‌ ಕಾರಣದಿಂದ ಸಂಘ–ಸಂಸ್ಥೆಗಳು ಪರಿಸರ ದಿನಾಚರಣೆಯನ್ನು ಸರಳವಾಗಿ ಆಯೋಜಿಸಿದವು. ಕೆಲವೇ ಮಂದಿಅಂತರ ಕಾಯ್ದುಕೊಂಡು ಸಸಿಗಳನ್ನು ನೆಟ್ಟರು. ಆನ್‌ಲೈನ್ ವೇದಿಕೆಯಲ್ಲೂ ಪರಿಸರ ಕಾಳಜಿ ಮೂಡಿಸುವ ವಿಚಾರ ಸಂಕಿರಣ, ಸಂವಾದ ಹಾಗೂ ವೆಬಿನಾರ್‌ಗಳು ನಡೆದವು.

ಬಿಡುಗಡೆಗೊಂಡು ಮನೆಗೆ ತೆರಳಿದ ರೋಗಿಗಳಿಗೆ ಜೆ.ಪಿ.ನಗರದ ಜಿವಿಜಿ ಇನ್ವಿವೊ ಆಸ್ಪತ್ರೆಯು ಸಸಿಗಳನ್ನು ವಿತರಿಸಿತು. ಕಮಲಾನಗರದ ರಾಷ್ಟ್ರಕವಿ ಕುವೆಂಪು ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ, ‘ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಮೂಡಬೇಕು. ವರ್ಷದ ಪ್ರತಿ ದಿನವೂ ಪರಿಸರ ದಿನವಾಗಬೇಕು’ ಎಂದರು.

ADVERTISEMENT

ಎನ್‌ಜಿಇಎಫ್‌ ಗೃಹ ನಿರ್ಮಾಣ ಮಂಡಳಿ ಹಾಗೂ ನಾಗರಬಾವಿ ಯುವಕರ ಸಂಘಗಳ ಸಹಯೋಗದಲ್ಲಿ ನಾಗರಬಾವಿ ವಾರ್ಡ್‌ನಲ್ಲಿ ಸಸಿ ನೆಡುವ ಕಾರ್ಯಕ್ಕೆ ವಸತಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಈ ವೇಳೆಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರವನ್ನೂ ವಿತರಿಸಲಾಯಿತು.

ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆ ಹಾಗೂ ರುಡ್‌ಸೆಟ್‌ ಸಂಸ್ಥೆಗಳ ಸಹಯೋಗದಲ್ಲಿ ಮಲ್ಲೇಶ್ವರದಲ್ಲಿ ಸಸಿಗಳನ್ನು ನೆಡಲಾಯಿತು. ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ ನೇತೃತ್ವದಲ್ಲಿ ರಾಜರಾಜೇಶ್ವರಿ ನಗರದ ವಿವಿಧ ಬಡಾವನೆಗಳಲ್ಲಿ ವಿವಿಧ ರೀತಿಯ ಜಾತಿಯ ಸಸಿಗಳನ್ನು ನೆಟ್ಟರು.

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ಪರಿಸರ ದಿನಕ್ಕೆ ಚಾಲನೆ ನೀಡಿದರು. ಕೋರಮಂಗಲದ ಚೆಕ್ ಪೋಸ್ಟ್ ಬಳಿರಿಫಾರೆಸ್ಟ್ ಇಂಡಿಯಾ ವತಿಯಿಂದ ಸಸಿ ನೆಡಲಾಯಿತು. ಶುದ್ಧ ಗಾಳಿ ಸಿಗಲಿ ಎಂಬ ಆಶಯದೊಂದಿಗೆ ಎಬಿವಿಪಿ ತಂಡದವರುಮಲ್ಲೇಶ್ವರದ ಹಲವು ಭಾಗಗಳಲ್ಲಿ ಸಸಿಗಳನ್ನು ನೆಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.