ADVERTISEMENT

ತಂಬಾಕು ಉತ್ಪನ್ನ: ದುಷ್ಪರಿಣಾಮದ ಜಾಗೃತಿ

ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ನಗರದ ವಿವಿಧೆಡೆ ನಡೆದ ಜಾಥಾ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 0:06 IST
Last Updated 1 ಜೂನ್ 2023, 0:06 IST
ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ತಂಬಾಕಿನ ಅಪಾಯದ ಬಗ್ಗೆ ಜಾಗೃತಿ ಮೂಡಿಸಿದರು. –ಪ್ರಜಾವಾಣಿ ಚಿತ್ರ
ವಿಶ್ವ ತಂಬಾಕು ರಹಿತ ದಿನದ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ತಂಬಾಕಿನ ಅಪಾಯದ ಬಗ್ಗೆ ಜಾಗೃತಿ ಮೂಡಿಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಶ್ವ ತಂಬಾಕು ರಹಿತ ದಿನದ ‍ಪ್ರಯುಕ್ತ ನಗರದ ವಿವಿಧೆಡೆ ವೈದ್ಯಕೀಯ ಸಂಸ್ಥೆಗಳು ಹಾಗೂ ಸಂಘಟನೆಗಳು ಜಾಥಾ ನಡೆಸಿ, ತಂಬಾಕು ಉತ್ಪನ್ನಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದವು. 

ಆರೋಗ್ಯ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಘಟಕದ ನೇತೃತ್ವದಲ್ಲಿ ಮಾಗಡಿ ರಸ್ತೆಯಲ್ಲಿರುವ ಆರೋಗ್ಯಸೌಧದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಸೈಕಲ್ ಜಾಥಾ ನಡೆಸಲಾಯಿತು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿ ನೂರಕ್ಕೂ ಅಧಿಕ ಮಂದಿ ಸೈಕಲ್ ಮೂಲಕ ಸಾಗಿದರು. ಮಾರ್ಗದುದ್ದಕ್ಕೂ ‘ತಂಬಾಕು ಉತ್ಪನ್ನಗಳ ಸೇವೆನೆ ಕ್ಯಾನ್ಸರ್‌ನಂತಹ ಕಾಯಿಲೆಗೆ ಆಹ್ವಾನ ನೀಡಲಿದೆ’ ಎಂದು ಸಾರಲಾಯಿತು.

ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸೇರಿ ವಿವಿಧ ಸಂಸ್ಥೆಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಜಂಟಿಯಾಗಿ ಜಾಗೃತಿ ಮೂಡಿಸಿದವು. ಸುಡುತ್ತಿರುವ ಸಿಗರೇಟ್ ಮಾದರಿ, ಧೂಮಪಾನದ ಹೊಗೆಯಿಂದ ಹಾನಿಗೊಳಗಾದ ಶ್ವಾಸಕೋಶ ಸೇರಿ ವಿವಿಧ ಮಾದರಿಗಳ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳು ಅರಿವು ಮೂಡಿಸುವ ಪ್ರಯತ್ನ ಮಾಡಿದರು. 

ADVERTISEMENT

ಸರ್ಕಾರದಿಂದ ಕ್ರಮ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ‘ದುಶ್ಚಟ ಮತ್ತು ದ್ವೇಷ ಮುಕ್ತ ಸಮಾಜ ನಿರ್ಮಾಣವಾದಾಗ ಮಾತ್ರ ರಾಷ್ಟ್ರ ಬಲಿಷ್ಠವಾಗಲು ಸಾಧ್ಯ. ತಂಬಾಕು ನಿಷೇಧಕ್ಕೆ ಜನಸಾಮಾನ್ಯರ ಸಂಪೂರ್ಣ ಬೆಂಬಲ ಅಗತ್ಯ. ನಾನು ಆರೋಗ್ಯ ಸಚಿವನಾಗಿದ್ದಾಗ ಶಾಲಾ-ಕಾಲೇಜು ಸುತ್ತಮುತ್ತ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಯಿತು. ಸಿಗರೇಟ್ ಪ್ಯಾಕ್‌ಗಳ ಮೇಲೆ ‘ಆರೋಗ್ಯಕ್ಕೆ ಹಾನಿಕರ’ ಎಂಬ ಸಾಲಿನ ಜತೆಗೆ, ಕ್ಯಾನ್ಸರ್ ಪೀಡಿತ ರೋಗಿಯ ಫೋಟೊ ಹಾಕಲು ಆದೇಶಿಸಲಾಯಿತು. ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಜನರ ಸಹಕಾರ ಅತ್ಯಗತ್ಯ’ ಎಂದು ಹೇಳಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ತಂಬಾಕು ಉತ್ಪನ್ನಗಳ ಸೇವನೆ ಅಭ್ಯಾಸವಾಗುತ್ತದೆ. ಇದರಿಂದಾಗಿ ಜೀವನಪೂರ್ತಿ ಅನಾರೋಗ್ಯದಿಂದ ಬಳಲಬೇಕಾಗುತ್ತದೆ. ಆದ್ದರಿಂದ ಸುತ್ತಮುತ್ತಲಿನವರು ಸಿಗರೇಟ್ ಸೇರಿದಂತೆ ವಿವಿಧ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದರೆ ಅವರಿಗೆ ತಂಬಾಕು ಸೇವನೆಯಿಂದಾಗುವ ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು’ ಎಂದು ತಿಳಿಸಿದರು. 

ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ, ‘ಒಂದು ಸಿಗರೇಟ್ ನಮ್ಮ 10 ದಿನಗಳ ಆಯಸ್ಸನ್ನು ಕಡಿಮೆಗೊಳಿಸುತ್ತದೆ. ಇದರಿಂದ ಜೀವನ ಪೂರ್ತಿ ಅನಾರೋಗ್ಯ ಸಮಸ್ಯೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುತ್ತದೆ. ಒಂದು ಸಿಗರೇಟ್ ಹಣಕ್ಕೆ ಮೊಟ್ಟೆ ಅಥವಾ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದರು.

ಯುವಜನ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಡೀನ್ ಡಾ. ರಮೇಶ್ ಕೃಷ್ಣ, ತಂಬಾಕು ನಿಯಂತ್ರಣ ಸಮಿತಿ ಸದಸ್ಯ ಡಾ. ವಿಶಾಲ್‌ ರಾವ್ ಇದ್ದರು. 

ಕಿದ್ವಾಯಿ ಸೇರಿ ವಿವಿಧ ವೈದ್ಯಕೀಯ ಸಂಸ್ಥೆ ಹಾಗೂ ಆಸ್ಪತ್ರೆಗಳಲ್ಲಿಯೂ ತಂಬಾಕು ಉತ್ಪನ್ನದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು. 

ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಸೈಕಲ್‌ ಜಾಥಾದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮತ್ತಿತರರು ಆರೋಗ್ಯ ಸೌಧದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಜಾಗೃತಿ ಮೂಡಿಸಿದರು –ಪ್ರಜಾವಾಣಿ ಚಿತ್ರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.