ADVERTISEMENT

‘ತಂಬಾಕಿಗೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹ’

ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿ. ಸುರೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 0:08 IST
Last Updated 1 ಜೂನ್ 2023, 0:08 IST

ಬೆಂಗಳೂರು: ‘ರಾಜ್ಯದಲ್ಲಿ ತಂಬಾಕು ಬೆಳೆಯುತ್ತಿರುವ ಸುಮಾರು 10 ಸಾವಿರ ರೈತರಿಗೆ ಪರ್ಯಾಯ ವಾಣಿಜ್ಯ ಬೆಳೆ ಬೆಳೆಯುವಂತೆ ಪ್ರೋತ್ಸಾಹಿಸುವ ಗುರಿ ಹೊಂದಲಾಗಿದೆ. ಪರ್ಯಾಯ ಬೆಳೆ ಆಯ್ಕೆ ಮಾಡಿಕೊಂಡವರಿಗೆ ಪ್ರೋತ್ಸಾಹಧನ ನೀಡುವಂತಾಗಬೇಕು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ. ಸುರೇಶ್ ತಿಳಿಸಿದರು. 

ವಿಶ್ವ ತಂಬಾಕು ರಹಿತ ದಿನದ ಪ್ರಯುಕ್ತ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ ಹಾಗೂ ಕೃಷಿ ವಿಶ್ವವಿದ್ಯಾಲಯ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

‘ತಂಬಾಕು ಸೇವನೆ ಪ್ರೋತ್ಸಾಹಿಸುವ ಕೆಲಸ ಮಾಡಬಾರದು. ವಿವೇಚನೆ ರಹಿತ ಪ್ರದೇಶಕ್ಕೆ ಅನುಗುಣವಲ್ಲದ ಬೆಳೆಗಳನ್ನು ಅವೈಜ್ಞಾನಿಕವಾಗಿ ಬೆಳೆಯುತ್ತಿರುವುದರಿಂದ ರೈತರ ಆರ್ಥಿಕ ಮಟ್ಟ ಕುಸಿದು, ಕೃಷಿ ಲಾಭದಾಯಕವಲ್ಲ ಎಂಬ ಭಾವನೆ ಮೂಡುತ್ತಿದೆ. ಮಲೆನಾಡಿನಲ್ಲಿ ಬೆಳೆಯುತ್ತಿರುವ ಅಡಿಕೆ ಇಂದು ಬಯಲು ಸೀಮೆಯಲ್ಲಿ ಹೆಚ್ಚಾಗಿ ಬೆಳೆಯುತ್ತಿರುವುದು ಇದಕ್ಕೆ ಉತ್ತಮ ಉದಾಹರಣೆ. ಧೂಮಪಾನ ಮತ್ತು ಮದ್ಯಪಾನದಂತಹ ದುಶ್ಚಟಗಳು ಮನುಷ್ಯರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ’ ಎಂದು ಹೇಳಿದರು.  

ADVERTISEMENT

ಚಲನಚಿತ್ರ ನಿರ್ದೆಶಕ ಸುರೇಶ್ ಹೆಬ್ಳೀಕರ್, ‘ಮನುಷ್ಯನ ಅತಿಯಾದ ಆಸೆಯಿಂದ ಹವಾಮಾನ ವೈಪರಿತ್ಯದಂತಹ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನಗಳು ಬೆಳೆದಂತೆ ಅವುಗಳ ದುಷ್ಪರಿಣಾಮಗಳೂ ಹೆಚ್ಚುತ್ತಾ ಹೋಗುತ್ತವೆ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 800 ಮಿಲಿಯನ್ ಟನ್‌ನಷ್ಟು ತಂಬಾಕನ್ನು ಬೆಳೆದು, ₹1,200 ಕೋಟಿಯಷ್ಟು ಲಾಭವನ್ನು ಖಾಸಗಿ ಕಂಪನಿಗಳು ಗಳಿಸುತ್ತಿರುವುದು ವಿಪರ್ಯಾಸ. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಿ, ಬಳಕೆ ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.

60 ತರಹದ ಕಾಯಿಲೆ: ನಿಮ್ಹಾನ್ಸ್‌ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ‘ತಂಬಾಕು ಉತ್ಪನ್ನಗಳ ಸೇವನೆಯಿಂದ 60 ತರಹದ ಕಾಯಿಲೆಗಳು ಮನುಷ್ಯನನ್ನು ಭಾದಿಸುತ್ತವೆ. ಅದರಲ್ಲೂ ಮುಖ್ಯವಾಗಿ ಕ್ಯಾನ್ಸರ್, ಹೃದಯ, ಸಕ್ಕರೆ ಹಾಗೂ ಲೈಂಗಿಕ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಡುತ್ತವೆ. 5 ವರ್ಷಗಳಲ್ಲಿ ಶೇ 15ರಷ್ಟು, ಕೋವಿಡ್ ಸಮಯದಲ್ಲಿ ಶೇ 40ರಷ್ಟು ಜನ ತಂಬಾಕು ಸೇವನೆ ತ್ಯಜಿಸಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿರುವುದಕ್ಕೆ ಸಾಕ್ಷಿ’ ಎಂದರು.

‘ಒಂದು ಸಿಗರೇಟ್ 400 ತರಹದ ರಾಸಾಯನಿಕಗಳನ್ನು ಒಳಗೊಂಡಿರಲಿದ್ದು, ತಾತ್ಕಾಲಿಕವಾಗಿ ಮನುಷ್ಯನ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇವು ಕ್ರಮೇಣ ಚಟವಾಗಿ ಪರಿಣಮಿಸಿ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಮನುಷ್ಯನ ಮನಸ್ಥಿತಿ ಬದಲಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.