ಬೆಂಗಳೂರು: ವಿಶ್ವ ಧೂಮಪಾನ ನಿಷೇಧ ದಿನದ(ಮೇ 31) ಅಂಗವಾಗಿ ಸಾರ್ವಜನಿಕರ ಆರೋಗ್ಯ ರಕ್ಷಿಸುವ ಹಾಗೂ ತಂಬಾಕು ನಿಯಂತ್ರಣದ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ಧೇಶದಿಂದ ಜೂನ್ 2ರವರೆಗೆ ನಗರದಲ್ಲಿ ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಬಾಲಕರಿಗೆ ತಂಬಾಕು ಮಾರಾಟ ಹಾಗೂ ಶಿಕ್ಷಣ ಸಂಸ್ಥೆಗಳ ಬಳಿ ತಂಬಾಕು ಮಾರಾಟ ಮಾಡುವಂತಹ ಉಲ್ಲಂಘನೆ ಪ್ರಕರಣಗಳ ವಿರುದ್ಧ ಪೊಲೀಸರು ತೀವ್ರ ನಿಗಾ ವಹಿಸಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಮಾರ್ಷಲ್ಸ್ ಹಾಗೂ ಎನ್‌ಜಿಒಗಳ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.
ಇ–ಸಿಗರೇಟ್‌ಗಳು, ವೇಪಿಂಗ್ ಸಾಧನಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ ನಿಷೇಧದ ಅನುಷ್ಠಾನಕ್ಕೆ ವಿಶೇಷ ಗಮನ ಹರಿಸಲಾಗಿದೆ. ಮಾಲ್‌ಗಳು, ಕಾಫಿ ಬಾರ್‌ಗಳು, ಅಂಗಡಿಗಳಲ್ಲಿ ಅನೀರಿಕ್ಷಿತ ಭೇಟಿಯ ಮೂಲಕ ತಪಾಸಣೆ ನಡೆಸಲಾಗುವುದು. ತಂಬಾಕು ವ್ಯಾಪಾರಿಗಳು ಪರವಾನಗಿ ಹೊಂದಿರುವುದು ಕಡ್ಡಾಯ ಎಂಬ ಜಾಗೃತಿ ಮೂಡಿಸಲಿದ್ದೇವೆ. ಹುಕ್ಕಾ ಬಾರ್‌ಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಇನ್ನೂ ಹುಕ್ಕಾ ಬಾರ್‌ಗಳು ಕಾರ್ಯಾಚರಿಸುತ್ತಿದ್ದರೆ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
₹80.8 ಲಕ್ಷ ದಂಡ ಸಂಗ್ರಹ: 2024ರಿಂದ 2025ರ ಏಪ್ರಿಲ್‌ವರೆಗೆ ನಗರದಲ್ಲಿ ಕೋಟ್ಪಾ (ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆ) ಅಡಿ 57,130 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ₹80.8 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.