ADVERTISEMENT

ಅಮೆರಿಕದಲ್ಲಿ ವಿಶ್ವ ಒಕ್ಕಲಿಗರ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 15:41 IST
Last Updated 5 ಜುಲೈ 2025, 15:41 IST
ಅಮೆರಿಕದ ಸ್ಯಾನ್‌ಹೋಸೆ ನಗರದಲ್ಲಿ ನಡೆಯುತ್ತಿರುವ ವಿಶ್ವ ಒಕ್ಕಲಿಗರ ಸಮ್ಮೇಳನದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಸಿ.ಎನ್. ಅಶ್ವತ್ಥನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು
ಅಮೆರಿಕದ ಸ್ಯಾನ್‌ಹೋಸೆ ನಗರದಲ್ಲಿ ನಡೆಯುತ್ತಿರುವ ವಿಶ್ವ ಒಕ್ಕಲಿಗರ ಸಮ್ಮೇಳನದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಸಿ.ಎನ್. ಅಶ್ವತ್ಥನಾರಾಯಣ ಮತ್ತಿತರರು ಪಾಲ್ಗೊಂಡಿದ್ದರು   

ಬೆಂಗಳೂರು: ಅಮೆರಿಕದ ಸ್ಯಾನ್‌ಹೋಸೆ ನಗರದ ಮೆಕನರಿ ಕನ್ವೆನ್ಷನ್‌ ಸೆಂಟರ್‌ನಲ್ಲಿ ಆರಂಭವಾದ ಮೂರು ದಿನಗಳ 18ನೇ ವಿಶ್ವ ಒಕ್ಕಲಿಗ ಮಹಾಸಮ್ಮೇಳನಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶನಿವಾರ ಚಾಲನೆ ನೀಡಿದರು.

ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮುದಾಯದ ಸದಸ್ಯರು, ವೈವಿಧ್ಯಮಯ ಸಂಸ್ಕೃತಿ, ಪರಂಪರೆ, ಉತ್ಸವವನ್ನು ಈ ಸಮ್ಮೇಳನದ ಮೂಲಕ ಜಗತ್ತಿಗೇ ತೆರೆದಿಟ್ಟರು. ಒಕ್ಕಲಿಗರ ಸಂಸ್ಕೃತಿಯ ಬಣ್ಣನೆ, ಭಕ್ತಿಯ ಮೆರವಣಿಗೆ, ಸುಗ್ಗಿ ಕುಣಿತ, ದೇವರ ಉತ್ಸವ, ಕೋಲಾಟ, ವೇಷ ಭೂಷಣಗಳ ಪ್ರದರ್ಶನವು ಸ್ಯಾನ್‌ಹೋಸೆ ನಗರದ ರಸ್ತೆಗಳಲ್ಲಿ ಜಾತ್ರಾ ಮಹೋತ್ಸವದ ಅನುಭವ ನೀಡಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, ‘ಒಕ್ಕಲಿಗರು ಜ್ಞಾನ, ಸ್ವಸಾಮರ್ಥ್ಯದಿಂದ ಸಮಾಜದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ತಮ್ಮ ಜ್ಞಾನ ಭಂಡಾರದಿಂದಲೇ ಅಮೆರಿಕ, ಯೂರೋಪ್ ಸೇರಿದಂತೆ ಹಲವು ದೇಶಗಳಲ್ಲಿ ನೆಲಸಿದ್ದಾರೆ’ ಎಂದರು.

ADVERTISEMENT

ಶಾಸಕ ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ‘ಅಮೆರಿಕದಲ್ಲಿರುವ ಹೊಸ ಅವಕಾಶಗಳನ್ನು ಬಳಸಿಕೊಂಡು ಅಭಿವೃದ್ಧಿ ಕಾಣಲು ಈ ಸಮ್ಮೇಳನ ಮಹತ್ವದ ಪಾತ್ರ ವಹಿಸುತ್ತದೆ’ ಎಂದರು. 

ವಿಶ್ವ ಒಕ್ಕಲಿಗರ ಪರಿಷತ್ ಆಫ್ ಅಮೆರಿಕದ ಅಧ್ಯಕ್ಷ ಧನಂಜಯ್ ಮಾತನಾಡಿ, ‘ಮೂಲತಃ ಕೃಷಿಕರಾಗಿರುವ ಒಕ್ಕಲಿಗ ಸಮುದಾಯದವರು ಇಂದು ಜಗತ್ತಿನ ಮೂಲೆ ಮೂಲೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮ್ಮೇಳನವನ್ನು ಮತ್ತಷ್ಟು ವಿಸ್ತಾರಗೊಳಿಸುವ ಯೋಚನೆ ಇದೆ’ ಎಂದರು.

ಸಮ್ಮೇಳನದಲ್ಲಿ ವಿಶಿಷ್ಟ ಭೋಜನ ವ್ಯವಸ್ಥೆ, ಸಮುದಾಯ ವಧು-ವರರ ಪರಿಚಯ ವೇದಿಕೆ, ಉದ್ಯಮಿಗಳಿಗೆ ‘ಬಿಸಿನೆಸ್ ಫೋರಂ’, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಮಹಿಳಾ ಚಟುವಟಿಕೆಗಳು ಸೇರಿದಂತೆ ಹಲವು ವಿಷಯಾಧಾರಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಸಂಸದ ಡಾ.ಕೆ.ಸುಧಾಕರ, ಶಾಸಕರಾದ ಸಿ.ಎಸ್.ಪುಟ್ಟರಾಜು, ಎಸ್‌.ಟಿ.ಸೋಮಶೇಖರ್, ಸತೀಶ್‌ರೆಡ್ಡಿ, ಗುಬ್ಬಿಯ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಒಕ್ಕಲಿಗ ಸಮುದಾಯದ ಮುಖಂಡ ಸಚ್ಚಿದಾನಂದ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು ಎಂದು ಸಂಘಟಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.