ADVERTISEMENT

ಮೇ 24ಕ್ಕೆ ‘ಯಾದೇ’ ಸಂಗೀತ ನಮನ

ಮಹಿಳಾ ದಕ್ಷತಾ ಸಮಿತಿಯಿಂದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 15:02 IST
Last Updated 21 ಮೇ 2025, 15:02 IST
ಆಶಾ ಭೋಸ್ಲೆ
ಆಶಾ ಭೋಸ್ಲೆ   

ಬೆಂಗಳೂರು: ಮಹಿಳಾ ದಕ್ಷತಾ ಸಮಿತಿಯು ಗಾಯಕರಾದ ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಅವರಿಗೆ ಸಂಗೀತ ನಮನ ಸಲ್ಲಿಸಲು ಇದೇ 24ರಂದು ಸಂಜೆ 6 ಗಂಟೆಗೆ ‘ಯಾದೇ’ ಶೀರ್ಷಿಕೆಯಡಿ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಉಪಾಧ್ಯಕ್ಷೆ ಉಷಾ ಕಾಮತ್, ‘ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರ ಆರೋಗ್ಯ, ಶಿಕ್ಷಣಕ್ಕೆ ಸಮಿತಿ ನೆರವಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ 300 ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಈ ಕಾರ್ಯಗಳಿಗೆ ನಿಧಿ ಸಂಗ್ರಹಿಸುವ ಸಂಬಂಧ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ನಿರೂಪಣೆಯಲ್ಲಿ ಸಂಗೀತ ಸಂಯೋಜಕ ಅರುಣ್ ಕುಮಾರ್ ಬಿ.ಎಸ್. ಅವರು ಈ ರಸಮಂಜರಿ ಕಾರ್ಯಕ್ರಮ ನಡೆಸಿಕೊಡುತ್ತಾರೆ’ ಎಂದು ತಿಳಿಸಿದರು. 

‘ಮೂರೂವರೆ ಗಂಟೆ ಈ ಕಾರ್ಯಕ್ರಮ ನಡೆಯಲಿದೆ. ಮೋಹನ್ ಕೃಷ್ಣ, ಸಮನ್ವಿತಾ ಶರ್ಮಾ, ಶ್ರುತಿ ಭೀಡೆ, ಗೋವಿಂದ್ ಕರ್ನೂಲ್ ಹಾಗೂ ಅಂಕಿತಾ ಕುಂಡು ಅವರು ಕಿಶೋರ್ ಕುಮಾರ್ ಮತ್ತು ಆಶಾ ಭೋಸ್ಲೆ ಅವರ ವಿವಿಧ ಗೀತೆಗಳನ್ನು ಹಾಡಲಿದ್ದಾರೆ. ಕಾರ್ಯಕ್ರಮದ ಪಾಸ್‌ಗಳು ‘ಬುಕ್‌ ಮೈ ಶೋ’ದಲ್ಲಿ ಲಭ್ಯವಿವೆ’ ಎಂದು ಹೇಳಿದರು. 

ADVERTISEMENT

ಪ್ರಕಾಶ್ ಬೆಳವಾಡಿ, ‘ಮಹಿಳಾ ದಕ್ಷತಾ ಸಮಿತಿಯು ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಇವುಗಳಿಗೆ ಆರ್ಥಿಕ ಸಂಪನ್ಮೂಲ ಅಗತ್ಯವಿದೆ. ಆದ್ದರಿಂದ ಈ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡದಲ್ಲಿ ಉತ್ತಮ ಗಾಯಕರಿದ್ದು, ಅವರಿಗೆ ಅವಕಾಶಗಳನ್ನು ಕಲ್ಪಿಸಬೇಕಿದೆ. ಆದರೆ, ಇತ್ತೀಚೆಗೆ ಕನ್ನಡ ಚಲನಚಿತ್ರಗಳಲ್ಲಿ ಇಲ್ಲಿನ ಗಾಯಕರಿಗೆ ಅಷ್ಟಾಗಿ ಅವಕಾಶ ನೀಡದೆ, ಬೇರೆ ಭಾಷೆಯ ಗಾಯಕರಿಗೆ ಹೆಚ್ಚಿನ ಅವಕಾಶ ಒದಗಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.