ADVERTISEMENT

ಖಾಸಗಿ ವ್ಯಕ್ತಿಗೆ ಯಲಹಂಕ ವಾಯುನೆಲೆಯ 10 ಎಕರೆ ಪರಭಾರೆ!

ಪ್ರಧಾನಿ, ರಕ್ಷಣಾ ಸಚಿವರಿಗೆ ದೂರು lಭೂಮಾಲೀಕತ್ವದ ಪ್ರಮಾಣಪತ್ರ ಸಲ್ಲಿಸಿದ ರಕ್ಷಣಾ ಇಲಾಖೆ

ಮಂಜುನಾಥ್ ಹೆಬ್ಬಾರ್‌
Published 10 ಫೆಬ್ರುವರಿ 2023, 21:40 IST
Last Updated 10 ಫೆಬ್ರುವರಿ 2023, 21:40 IST
ಕೆ.ಎನ್‌.ಚಕ್ರಪಾಣಿ
ಕೆ.ಎನ್‌.ಚಕ್ರಪಾಣಿ   

ನವದೆಹಲಿ: ಮೂಲ ದಾಖಲೆಗಳನ್ನು ಪರಿಶೀಲಿಸದೆಯೇ ಬೆಂಗಳೂರಿನ ಯಲಹಂಕ ವಾಯುನೆಲೆಗೆ ಸೇರಿದ 10 ಎಕರೆ 23 ಗುಂಟೆ ಜಾಗವನ್ನು ಬೆಂಗಳೂರು ಉತ್ತರ ವಿಶೇಷ ಜಿಲ್ಲಾಧಿಕಾರಿಯವರು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಡಲು ಆದೇಶಿಸಿದ್ದಾರೆ. ಇದು ನಿಯಮಬಾಹಿರ ಆದೇಶವಾಗಿದೆ ಎಂದು ಪ್ರತಿಪಾದಿಸಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಈ ಪ್ರಕರಣದಲ್ಲಿ ರಕ್ಷಣಾ ಇಲಾಖೆಯನ್ನು ಪ್ರತಿವಾದಿಯನ್ನಾಗಿ ಮಾಡದೆಯೇ ವಿಶೇಷ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಇದನ್ನು ಕೂಡಲೇ ರದ್ದುಪಡಿಸಬೇಕು ಎಂದು ರಕ್ಷಣಾ ಇಲಾಖೆಯ ಎಸ್ಟೇಟ್‌ ಅಧಿಕಾರಿ ಅವರು 2022ರ ನವೆಂಬರ್‌ 5ರಂದು ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

‘ಈ ಅಕ್ರಮದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಮುಖಂಡ ಕೆ.ಎನ್‌.ಚಕ್ರಪಾಣಿ ಅವರು ದಾಖಲೆಗಳ ಸಹಿತ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಜನವರಿಯಲ್ಲಿ ದೂರು ಸಲ್ಲಿಸಿದ್ದಾರೆ.

ADVERTISEMENT

ಏನಿದು ಅಕ್ರಮ: ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯುದ್ಧ ವಿಮಾನಗಳನ್ನು ಇಳಿಸಲು 1945ರ ಜೂನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಜಾಗ ವನ್ನು ಪಡೆಯಲಾಗಿತ್ತು. ಬೆಂಗಳೂರು ಉತ್ತರ (ಹೆಚ್ಚುವರಿ) ತಾಲ್ಲೂಕಿನ ಹುಣಸಮಾರನಹಳ್ಳಿ ಸೇರಿದಂತೆ 9 ಗ್ರಾಮಗಳ 868 ಎಕರೆ 31 ಗುಂಟೆಯನ್ನು ರಕ್ಷಣಾ ಇಲಾಖೆ 1973ರ ಮಾರ್ಚ್‌ 2ರಂದು ಸ್ವಾಧೀನಪಡಿಸಿಕೊಂಡಿತ್ತು. ಆಗ ಎಕರೆಗೆ ₹6 ಸಾವಿರದಂತೆ ₹52.73 ಲಕ್ಷವನ್ನು ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ನೀಡಿತ್ತು.

ಹುಣಸಮಾರನಹಳ್ಳಿಯ ಸರ್ವೆ ಸಂಖ್ಯೆ 175ರ 4 ಎಕರೆ 23 ಗುಂಟೆ, ಸರ್ವೆ ಸಂಖ್ಯೆ 176ರ 1 ಎಕರೆ ಹಾಗೂ ಸರ್ವೆ ಸಂಖ್ಯೆ 184ರ 5 ಎಕರೆ ಜಾಗಕ್ಕೆ ಕೆ.ಆರ್.ಪುರದ ನಿವಾಸಿ ಮಹೇಶ್ವರಿ ಎಂಬುವರು 2007ರಲ್ಲಿ ಹಕ್ಕು ಸ್ಥಾಪಿಸಿದ್ದರು. ಈ ಜಾಗವು ತನ್ನ ತಂದೆ ಕೆ.ನಾರಾಯಣಯ್ಯ ಅವರಿಗೆ ಸೇರಿದ್ದು ಎಂದೂ ಹೇಳಿಕೊಂಡಿದ್ದರು. 2007ರಲ್ಲಿ ಈ ಜಾಗವನ್ನು ₹1.2 ಕೋಟಿಗೆ ಮಾರಲು ವಸಂತನಗರದ ಅಶ್ವಿನ್‌ ಎಂ.ಠಕ್ಕರ್‌ ಎಂಬುವರ ಜತೆಗೆ ಒಪ್ಪಂದ ಮಾಡಿಕೊಂಡಿದ್ದರು.

ಕುತೂಹಲಕರ ವಿಷಯವೆಂದರೆ, 10 ಎಕರೆ 23 ಗುಂಟೆ ಜಾಗವು 1965ರಲ್ಲಿ ತನ್ನ ಪತಿ ಕೆ.ನಾರಾಯಣಯ್ಯ ಅವರಿಗೆ ಮಂಜೂರಾಗಿದೆ ಎಂದು ಪ್ರತಿಪಾದಿಸಿ ಪದ್ಮಾವತಿ ಎಂಬುವರು ಬೆಂಗಳೂರು ಉತ್ತರ (ಹೆಚ್ಚುವರಿ) ತಹಶೀಲ್ದಾರ್‌ ಕಚೇರಿಗೆ 2009ರಲ್ಲಿ ಅರ್ಜಿ ಸಲ್ಲಿಸಿದ್ದರು. ‘ಈ ಸ್ವತ್ತುಗಳ ಖಾತೆಯನ್ನು 1965ರಲ್ಲೇ ಕೆ. ನಾರಾಯಣಯ್ಯ ಅವರ ಹೆಸರಿಗೆ ಮಾಡಿಕೊಡಲಾಗಿದೆ. 1995ರಲ್ಲಿ ನಾರಾಯಣಯ್ಯ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ನಾಲ್ವರು ಮಕ್ಕಳು ಈ ಜಾಗಕ್ಕೆ ನೈಜ ವಾರಸುದಾರರು. ಆರ್‌ಟಿಸಿ ಕಾಲಂನಲ್ಲಿ ರಕ್ಷಣಾ ಇಲಾಖೆ ಎಂಬುದನ್ನು ರದ್ದುಪಡಿಸಿ ಪದ್ಮಾವತಿ ಕುಟುಂಬಕ್ಕೆ ಖಾತೆ ಮಾಡಿಕೊಡಬಹುದು’ ಎಂದು ವಿಶೇಷ ತಹಶೀಲ್ದಾರ್ ಅವರು 2009ರಲ್ಲಿ ವಿಶೇಷ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಆದರೆ, ಆಗಿನ ವಿಶೇಷ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ನಡುವೆ, ಪದ್ಮಾವತಿ ಅವರು ಈ ಜಾಗವನ್ನು 2013ರ ಏಪ್ರಿಲ್‌ 19ರಂದು ಮೊಹಮ್ಮದ್‌ ಸನಾವುಲ್ಲಾ ಹಾಗೂ ಲತಾ ಎಸ್‌.ಎನ್‌. ಎಂಬುವರಿಗೆ ₹5 ಕೋಟಿಗೆ ಮಾರಿದ್ದರು.

ಈ ಜಾಗದ ದಾಖಲೆ ನೈಜತೆ ಬಗ್ಗೆ ಭೂ ಕಂದಾಯ ಕಾಯ್ದೆ 1964ರಡಿ ವಿಚಾರಣೆ ನಡೆಯುತ್ತಿದ್ದು, ಜಾಗದ ವಸ್ತುಸ್ಥಿತಿ ಬಗ್ಗೆ ವರದಿ ಸಲ್ಲಿಸುವಂತೆ ವಿಶೇಷ ಜಿಲ್ಲಾಧಿಕಾರಿ ಅವರು ವಿಶೇಷ ತಹಶೀಲ್ದಾರ್ ಅವರಿಗೆ 2015ರ ಜನವರಿ 2ರಂದು ನಿರ್ದೇಶನ ನೀಡಿದ್ದರು. ಜಮೀನಿನ ಮಾಲೀಕತ್ವದ ಕುರಿತು 2009ರಲ್ಲೇ ವರದಿ ನೀಡಿದ್ದು, ಬಳಿಕ ಯಾವುದೇ ಬದಲಾವಣೆ ಆಗಿಲ್ಲ ಎಂದು ವಿಶೇಷ ತಹಶೀಲ್ದಾರ್ 2015ರ ಫೆಬ್ರುವರಿ 10ರಂದು ವರದಿ ಸಲ್ಲಿಸಿದ್ದರು.

ಈ ಮಧ್ಯೆ, ಈ ಪ್ರಕರಣದಲ್ಲಿ ವಿಶೇಷ ಜಿಲ್ಲಾಧಿಕಾರಿಯವರ ನ್ಯಾಯಾಲಯದಲ್ಲಿ ಮೊಹಮ್ಮದ್‌ ಸನಾವುಲ್ಲಾ ಹೆಸರನ್ನು ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಲಾಗಿತ್ತು. 10 ಎಕರೆ 23 ಗುಂಟೆ ಜಾಗಕ್ಕೆ ಪದ್ಮಾವತಿ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಆಗಿನ ವಿಶೇಷ ಜಿಲ್ಲಾಧಿಕಾರಿ ಮೊಹಮ್ಮದ್‌ ಸಲಾವುದ್ದೀನ್‌ 2016ರ ಜನವರಿಯಲ್ಲಿ ಆದೇಶ ಹೊರಡಿಸಿದ್ದರು. ಈ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಜಿಲ್ಲಾಧಿಕಾರಿ ವರದಿಯಲ್ಲೇನಿದೆ? ’ಹುಣಸಮಾರನಹಳ್ಳಿ ಗ್ರಾಮವು ಜೋಡಿ ಇನಾಂ ಗ್ರಾಮ. ಈಗಿನ ಪಹಣಿ ಪ್ರಕಾರ, ಮೂರು ಸರ್ವೆ ಸಂಖ್ಯೆಯಲ್ಲಿರುವ 10 ಎಕರೆ 23 ಗುಂಟೆ ರಕ್ಷಣಾ ಇಲಾಖೆಯ ಹೆಸರಿನಲ್ಲಿದೆ. ಈ ಜಮೀನಿನ ಅಧಿಬೋಗದಾರಿಕೆಯ ಹಕ್ಕನ್ನು ಇನಾಂ ವಿಶೇಷ ಜಿಲ್ಲಾಧಿಕಾರಿ ಅವರು ಕೆ.ನಾರಾಯಣಯ್ಯ ಅವರಿಗೆ ಮಂಜೂರು ಮಾಡಿರುವ (ಪ್ರಕರಣ ಸಂಖ್ಯೆ 20+40/62-63) ಕಡತವು ಕಚೇರಿಯಲ್ಲಿ ಇಲ್ಲ. ಆದರೆ, ಅರ್ಜಿದಾರರ ಬಳಿ ಮಂಜೂರಾತಿ ಆದೇಶಗಳ ಪ್ರತಿಗಳು ಇವೆ. ಇದರ ಆಧಾರದಲ್ಲಿ ವಿಶೇಷ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ಸರಿಯಲ್ಲ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರು ಕಂದಾಯ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.