ADVERTISEMENT

ಯಲಹಂಕ ಎಲಿವೇಟೆಡ್‌ ಕಾರಿಡಾರ್‌: ಬಿಲ್‌ ಪಾವತಿ ವಿಳಂಬದಿಂದ ಕಾಮಗಾರಿ ನಿಧಾನ

ಯಲಹಂಕದಲ್ಲಿ ಇಂಟಿಗ್ರೇಟೆಡ್‌ ಎಲಿವೇಟೆಡ್‌ ಕಾರಿಡಾರ್‌; ಇನ್ನೊಂದು ವರ್ಷ ಗಡುವು ವಿಸ್ತರಣೆ

ಆರ್. ಮಂಜುನಾಥ್
Published 15 ಜುಲೈ 2024, 21:19 IST
Last Updated 15 ಜುಲೈ 2024, 21:19 IST
ಯಲಹಂಕದಲ್ಲಿ ಇಂಟಿಗ್ರೇಟೆಡ್‌ ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿ ಎನ್‌ಇಎಸ್‌ ವೃತ್ತದ ಸಮೀಪ ಸ್ಥಗಿತಗೊಂಡಿದೆ
ಪ್ರಜಾವಾಣಿ ಚಿತ್ರ: ಸುರೇಶ್‌
ಯಲಹಂಕದಲ್ಲಿ ಇಂಟಿಗ್ರೇಟೆಡ್‌ ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿ ಎನ್‌ಇಎಸ್‌ ವೃತ್ತದ ಸಮೀಪ ಸ್ಥಗಿತಗೊಂಡಿದೆ ಪ್ರಜಾವಾಣಿ ಚಿತ್ರ: ಸುರೇಶ್‌   

ಬೆಂಗಳೂರು: ಬಿಬಿಎಂಪಿ ಸಕಾಲದಲ್ಲಿ ಮುಂಗಡ ಅನುದಾನ ಬಿಡುಗಡೆ ಮಾಡದಿರುವುದು ಮತ್ತು ಬಿಲ್‌ ಪಾವತಿಯಲ್ಲಿನ ಅತಿಯಾದ ವಿಳಂಬದಿಂದ ಯಲಹಂಕ ಇಂಟಿಗ್ರೇಟೆಡ್‌ ಎಲಿವೇಟೆಡ್‌ ಕಾರಿಡಾರ್‌ ಕಾಮಗಾರಿಯ ಪ್ರಗತಿ ಕುಂಠಿತವಾಗಿದೆ. ಗುತ್ತಿಗೆದಾರರೂ ಬಿಬಿಎಂಪಿಯತ್ತಲೇ ಬೆರಳು ತೋರುತ್ತಿದ್ದಾರೆ.

‘ಕಾಮಗಾರಿ ಪ್ರಗತಿಯಾಗದಿರಲು ಪ್ರಮುಖ ಕಾರಣ ಬಿಲ್ ಪಾವತಿಯಲ್ಲಿ ವಿಳಂಬ. 60 ದಿನಗಳಲ್ಲಿ ಬಿಲ್‌ ಪಾವತಿ ಮಾಡಬೇಕೆಂಬ ನಿಯಮವನ್ನೂ ಪಾಲಿಸಿಲ್ಲ. ಈ ಬಗ್ಗೆ ಹಲವು ಪತ್ರಗಳನ್ನು ಬರೆದು ಬಿಲ್‌ ಪಾವತಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ...’ ಎಂದು ಈ ಕಾಮಗಾರಿಯ ಗುತ್ತಿಗೆ ಪ‍ಡೆದಿರುವ ಎನ್‌ಸಿಸಿ, ಬಿಬಿಎಂಪಿಗೆ ಬರೆದಿರುವ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಿದೆ. ಇದರ ಜೊತೆಗೆ ‘ಯುಟಿಲಿಟಿ ಶಿಫ್ಟಿಂಗ್‌’ನಲ್ಲಿ ನಿರೀಕ್ಷಿತ ನೆರವು ಸಿಗದ್ದರಿಂದ 2025ರ ಫೆಬ್ರುವರಿ 24ರವರೆಗೆ ಕಾಮಗಾರಿ ಮುಗಿಸಲು ಸಮಯ ನೀಡಬೇಕು ಎಂದೂ ಮನವಿ ಮಾಡಿದೆ.

‘2022ರಲ್ಲಿ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳ ದಾಸ್ತಾನಿಗೆ ಮುಂಗಡ ನೀಡಲು 60 ದಿನ ವಿಳಂಬವಾಗಿದೆ, 2022ರ ಮೇ ಬಿಲ್‌ ಪಾವತಿಯಲ್ಲಿ 129 ದಿನ, ಆಗಸ್ಟ್‌ ಬಿಲ್‌ ಪಾವತಿಯಲ್ಲಿ 52 ದಿನ, ಸೆಪ್ಟೆಂಬರ್‌ ಬಿಲ್‌ ಪಾವತಿಯಲ್ಲಿ ನಾಲ್ಕು ದಿನ, 2023ರ ಡಿಸೆಂಬರ್‌ ಬಿಲ್‌ನಲ್ಲಿ 225 ದಿನ, ಫೆಬ್ರುವರಿ ಬಿಲ್‌ನಲ್ಲಿ 163 ದಿನ ವಿಳಂಬವಾಗಿದೆ. ಕೊನೆಯ ಎರಡು ಬಿಲ್‌ಗಳ ಮೊತ್ತದಲ್ಲಿ ಶೇ 75ರಷ್ಟನ್ನು ಮಾತ್ರ ಪಾವತಿಸಲಾಗಿದೆ. ಇದು ಗುತ್ತಿಗೆ ಒಪ್ಪಂದದಲ್ಲಿನ ನಿಯಮಗಳ ಉಲ್ಲಂಘನೆಯಾಗಿದೆ’ ಎಂದು ಎನ್‌ಸಿಸಿಯ ಉಪ ಪ್ರಧಾನ ವ್ಯವಸ್ಥಾಪಕರು ರಸ್ತೆ ಮೂಲಸೌಕರ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ 2023ರ ನವೆಂಬರ್‌ 15ರಂದು ಪತ್ರ ಬರೆದಿದ್ದಾರೆ.

ಯಲಹಂಕದ ಪೊಲೀಸ್‌ ಠಾಣೆ ಜಂಕ್ಷನ್‌ನಿಂದ ಯಲಹಂಕ ಉಪನಗರದ ಬಿಡಬ್ಲ್ಯುಎಸ್‌ಎಸ್‌ಬಿ ಜಂಕ್ಷನ್‌ವರೆಗೆ ಮೇಲ್ಸೇತುವೆ ಕಾಮಗಾರಿ 2021ರಲ್ಲಿ ಆರಂಭವಾಗಿದ್ದು, 2024ರ ಜನವರಿ ವೇಳೆಗೆ ಮುಗಿಯಬೇಕಿತ್ತು. ಆದರೆ, ಬಿಬಿಎಂಪಿಯಿಂದ ಬಿಲ್‌ ಪಾವತಿ ವಿಳಂಬದಿಂದ ಕಾಮಗಾರಿ ಪ್ರಗತಿ ಸುಮಾರು ಒಂದು ವರ್ಷದಷ್ಟು ಹಿಂದಿದೆ. ಇದನ್ನು ಗುತ್ತಿಗೆದಾರರೇ ಸ್ಪಷ್ಟಪಡಿಸಿದ್ದು, ಬಿಬಿಎಂಪಿಯು ಗಡುವನ್ನೂ ವಿಸ್ತರಿಸಿದೆ.

‘ಟರ್ನ್‌ ಕೀ’ ಯೋಜನೆ ಇದಾಗಿರುವುದರಿಂದ ಬಿಬಿಎಂಪಿಗೆ ಆರ್ಥಿಕ ಹೊರೆಯಾಗುತ್ತಿಲ್ಲ. ಆದರೆ, ಜನಸಾಮಾನ್ಯರಿಗೆ ನಿತ್ಯವೂ ಇಲ್ಲಿ ಸಂಚರಿಸುವುದೇ ಕಷ್ಟಸಾಧ್ಯವಾಗಿದೆ. ಅನ್ಯ ಮಾರ್ಗವಿಲ್ಲದೆ, ಸಮಯ ವ್ಯಯದ ಜೊತೆಗೆ ಕಿರಿಕಿರಿಯೊಂದಿಗೆ ಇಲ್ಲಿಯೇ ಸಂಚರಿಸಬೇಕಾಗಿದೆ.

‘ಯಾವಾಗ ಕೇಳಿದರೂ ಹಣ ಬಂದಿಲ್ಲ, ಹೇಗೆ ಕೆಲಸ ಮಾಡೋದು ಎಂದು ಗುತ್ತಿಗೆದಾರರು ಹೇಳುತ್ತಾರೆ. ಬಿಬಿಎಂಪಿಯವರಿಗೆ ನಮ್ಮ ಕಷ್ಟ ಅರ್ಥವಾಗೋದು ಹೇಗೆ? ಕೆಲಸ ಆರಂಭಿಸಿದ ಮೇಲೆ ಬೇಗ ಮುಗಿಸಿದರೆ ಒಳ್ಳೆಯದು. ಹಣವಿಲ್ಲ ಎಂದರೆ ಇಂತಹ ಯೋಜನೆ ಕೈಗೆತ್ತಿಕೊಳ್ಳಬೇಡಿ’ ಎಂದು ಯಲಹಂಕದ ವಿಶ್ವನಾಥ್‌ ಹೇಳಿದರು.

‘ಬೆಸ್ಕಾಂ, ಜಲಮಂಡಳಿಯಿಂದ ಮಾರ್ಗಗಳ ಬದಲಾವಣೆಯಿಂದ ಕಾಮಗಾರಿ ಸಾಕಷ್ಟು ವಿಳಂಬವಾಗುತ್ತಿದೆ ಎಂದು ಕೆಲವರು ಹೇಳುತ್ತಾರೆ. ಮುಖ್ಯಮಂತ್ರಿ, ಪ್ರಧಾನಿ ಬಂದಾಗ ರಾತ್ರೋರಾತ್ರಿ ಕೆಲಸ ಮಾಡುವ ಈ ಎಂಜಿನಿಯರ್‌ಗಳು ಜನಸಾಮಾನ್ಯರ ಕೆಲಸಕ್ಕೂ ಅಷ್ಟೇ ಪ್ರಾಮುಖ್ಯ ನೀಡಬೇಕಲ್ಲವೇ’ ಎಂದು ಯಲಹಂಕ ಉಪನಗರದ ಸುರೇಶ್‌ ಪ್ರಶ್ನಿಸಿದರು.

ಸಂದೀಪ್‌ ಉನ್ನಿಕೃಷ್ಣನ್ ರಸ್ತೆಯಲ್ಲಿ ಯಲಹಂಕದಲ್ಲಿ ಇಂಟಿಗ್ರೇಟೆಡ್‌ ಎಲಿವೇಟೆಡ್‌ ಕಾರಿಡಾರ್‌ನ ಕಾಮಗಾರಿ ಇನ್ನು ಪಿಲ್ಲರ್‌ ಆರಂಭದ ಸ್ಥಿತಿಯಲ್ಲಿದೆ ಪ್ರಜಾವಾಣಿ ಚಿತ್ರ: ಸುರೇಶ್‌

‘ಸುಮ್ಮನೆ ಕೆಲಸ ಮಾಡಬೇಕು’

‘ಬಿಬಿಎಂಪಿಯಲ್ಲಿ ಬಿಲ್‌ ಪಾವತಿ ಮುಂದೂಡಿಕೆ ವಿಳಂಬ ಇದ್ದೇ ಇರುತ್ತದೆ. ಇದು ಇಂದು ನಿನ್ನೆಯದ್ದಲ್ಲ. ಬಹಳ ಹಿಂದಿನಿಂದಲೂ ಹೀಗೇ ಇದೆ. ಕೆಲಸ ಮಾಡಲು ಬರುವವರಿಗೆ ಇದರ ಅರಿವು ಇದ್ದೇ ಇದೆ. ಬಿಲ್‌ ಪಾವತಿ ವಿಳಂಬವಾದರೆ ತಡೆದುಕೊಳ್ಳಬೇಕು. ಬಿಲ್‌ ಪಾವತಿಯಲ್ಲಿ ಮೂರು ತಿಂಗಳು ಆರು ತಿಂಗಳು ವಿಳಂಬವಾಗುತ್ತದೆ. ಬಿಬಿಎಂಪಿಗೆ ಕೆಲಸಕ್ಕೆ ಬಂದ ಮೇಲೆ ಸುಮ್ಮನೆ ಕೆಲಸ ಮಾಡಬೇಕು. ಕಾಮಗಾರಿ ನಿಧಾನವಾಗಲು ಬಿಲ್‌ ಪಾವತಿಯಲ್ಲಿನ ವಿಳಂಬ ಎಂದು ಸಬೂಬು ಹೇಳಬಾರದು’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಬಿ.ಎಸ್. ಪ್ರಹ್ಲಾದ್‌ ಗುತ್ತಿಗೆದಾರರ ಆರೋಪಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.