ADVERTISEMENT

ಯಲಹಂಕ: 30 ಎಕರೆ ಅರಣ್ಯ ಭಸ್ಮ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2019, 18:46 IST
Last Updated 24 ಫೆಬ್ರುವರಿ 2019, 18:46 IST
ಯಲಹಂಕ ಸಮೀಪದ ಜಾರಕಬಂಡೆ ಕಾವಲ್ ಅರಣ್ಯಪ್ರದೇಶದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಅರಣ್ಯಪ್ರದೇಶ ಹೊತ್ತಿಉರಿಯಿತು.
ಯಲಹಂಕ ಸಮೀಪದ ಜಾರಕಬಂಡೆ ಕಾವಲ್ ಅರಣ್ಯಪ್ರದೇಶದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಅರಣ್ಯಪ್ರದೇಶ ಹೊತ್ತಿಉರಿಯಿತು.   

ಯಲಹಂಕ: ವಾಯುನೆಲೆಗೆ ಸಮೀಪದ ಬಾಗಲೂರಿನಲ್ಲಿರುವ ಮಾವಳ್ಳಿಪುರ ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಖಾಸಗಿ ನೀಲಗಿರಿ ತೋಪು ಸೇರಿದಂತೆ ಸುಮಾರು 30 ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಸಿ.ಆರ್.ಪಿ.ಎಫ್ ಹಿಂಭಾಗ ಮೈಲಪ್ಪನಹಳ್ಳಿ, ಆರ್.ಟಿ.ಒ. ಕಚೇರಿ ರಸ್ತೆಗೆ ಹೊಂದಿಕೊಂಡಂತಿರುವ ಜಾರಕಬಂಡೆ, ವೀರಸಾಗರ ಅರಣ್ಯ ಪ್ರದೇಶ ಸೇರಿದಂತೆ ಮೂರು ಕಡೆಗಳಲ್ಲಿ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಸಮಯ ಬೆಂಕಿ ಕಾಣಿಸಿಕೊಂಡಿದೆ.ತರಗೆಲೆಗಳಿಗೆ ಬಿದ್ದ ಬೆಂಕಿ ಕ್ಷಣಾರ್ಧದಲ್ಲೇ ಸುತ್ತಮುತ್ತ ವ್ಯಾಪಿಸಿದೆ. ಶಿವಕೋಟೆಯ ವೀರಭದ್ರಪ್ಪ ಅವರ ನೀಲಗಿರಿ ತೋಟ ಸುಟ್ಟುಹೋಗಿದೆ.

ಶನಿವಾರ ವಾಯುನೆಲೆಯ ಪಾರ್ಕಿಂಗ್‌ ಪ್ರದೇಶದಲ್ಲಿ ಹುಲ್ಲಿಗೆ ಬೆಂಕಿ ಬಿದ್ದು 300ಕ್ಕೂ ಹೆಚ್ಚು ಕಾರುಗಳು ಅಗ್ನಿಗೆ ಆಹುತಿಯಾಗಿದ್ದವು. ಬೆನ್ನಹಿಂದೆಯೇ ಇದೇ ಪ್ರದೇಶದ ಅನತಿ ದೂರದಲ್ಲಿ ಬೆಂಕಿ ದುರಂತ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಸ್ಥಳಕ್ಕೆ ಬಂದ ಏಳೆಂಟು ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿ ಹಸಿಸೊಪ್ಪಿನಿಂದ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಬೆಂಕಿಯ ಉರಿ ಹೆಚ್ಚಿದ ಕಾರಣ ನಂದಿಸಲು ಧಾವಿಸುವುದೂ ಸುಲಭವಿರಲಿಲ್ಲ. ಕೆಲ ಕಾಲದ ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸಿದರು ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT