ADVERTISEMENT

ಯಲಹಂಕ: ಮಾದಕದ್ರವ್ಯ ಸೇವನೆ, ಸೈಬರ್‌ ಅಪರಾಧದ ವಿರುದ್ಧ ಜಾಗೃತಿ ಓಟ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 16:02 IST
Last Updated 10 ಮಾರ್ಚ್ 2025, 16:02 IST
ಮಾದಕದ್ರವ್ಯ ಸೇವನೆ ಮತ್ತು ಸೈಬರ್‌ ಅಪರಾಧದ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಮ್ಯಾರಥಾನ್‌ ಓಟದಲ್ಲಿ ಪೊಲೀಸ್‌ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಾದಕದ್ರವ್ಯ ಸೇವನೆ ಮತ್ತು ಸೈಬರ್‌ ಅಪರಾಧದ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಲು ಆಯೋಜಿಸಿದ್ದ ಮ್ಯಾರಥಾನ್‌ ಓಟದಲ್ಲಿ ಪೊಲೀಸ್‌ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.   

ಯಲಹಂಕ: ಕರ್ನಾಟಕ ರಾಜ್ಯ ಪೊಲೀಸ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮಾದಕದ್ರವ್ಯ ಸೇವನೆ ಮತ್ತು ಸೈಬರ್‌ ಅಪರಾಧದ ವಿರುದ್ಧ ಯುವಕರಲ್ಲಿ ಜಾಗೃತಿ ಮೂಡಿಸಲು ಮ್ಯಾರಥಾನ್‌ ಓಟ ಏರ್ಪಡಿಸಲಾಗಿತ್ತು.

ಪ್ರೆಸಿಡೆನ್ಸಿ ಕಾಲೇಜಿನಿಂದ ಆರಂಭವಾದ 5 ಕಿಲೋಮೀಟರ್‌ ದೂರದ ಓಟವು, ರಾಜಾನುಕುಂಟೆ ಪೊಲೀಸ್‌ ಠಾಣೆಯವರೆಗೆ ತೆರಳಿ, ಮತ್ತೆ ಕಾಲೇಜಿನ ಬಳಿಗೆ ಆಗಮಿಸಿತು. ಈ ಓಟದಲ್ಲಿ ಚಿತ್ರನಟ-ನಟಿಯರು, ಪ್ರೆಸಿಡೆನ್ಸಿ ಮತ್ತು ಸುತ್ತಮುತ್ತಲ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ 30 ಪೊಲೀಸ್‌ ಠಾಣೆಗಳ ಸಿಬ್ಬಂದಿ ಸೇರಿ 700ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಮಾದಕದ್ರವ್ಯ ಮತ್ತು ಸೈಬರ್‌ ಅಪರಾಧದ ಪಿಡುಗಿನಿಂದ ಯುವಕರ ಮೇಲೆ ಪ್ರತಿಕೂಲ ಪರಿಣಾಮ ಬೀರಿ, ಜೀವನವನ್ನು ಹಾಳುಮಾಡುತ್ತದೆ. ಈ ದಿಸೆಯಲ್ಲಿ ಯುವಕರು ಈ ದುಷ್ಚಟಗಳಿಂದ ದೂರವಿದ್ದು, ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಮಾದಕ ವಸ್ತುಗಳು ಮತ್ತು ಸೈಬರ್‌ ಅಪರಾಧದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ರಾಜ್ಯ ಪೊಲೀಸರೊಂದಿಗೆ ಪಾಲುದಾರಿಕೆ ವಹಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಕುಲಪತಿ ಡಾ.ನಿಸಾರ್‌ ಅಹಮದ್‌ ಹೇಳಿದರು.

ಪ್ರೆಸಿಡೆನ್ಸಿ ಸಮೂಹ ಶಿಕ್ಷಣಸಂಸ್ಥೆಯ ಉಪಾಧ್ಯಕ್ಷ ಸುಹೇಲ್‌ ಅಹ್ಮದ್‌, ಚಿತ್ರನಟರಾದ ಧ್ರುವ ಸರ್ಜಾ, ಶ್ರೀಮುರಳಿ, ಅಕುಲ್‌ ಬಾಲಾಜಿ, ನಟಿಯರಾದ ಮಾನ್ವಿತಾ ಕಾಮತ್‌, ಸ್ಫೂರ್ತಿ ಉದಿಮನೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.