ADVERTISEMENT

ಯಲಹಂಕ | ಗ್ರಾಮಸಭೆಗೆ ಅಧಿಕಾರಿಗಳ ಗೈರು: ಕಿಡಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 16:18 IST
Last Updated 21 ಆಗಸ್ಟ್ 2025, 16:18 IST
<div class="paragraphs"><p>ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್‌ ಟಿವಿ ವಿತರಿಸಲಾಯಿತು. </p></div>

ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಗ್ರಾಮಪಂಚಾಯಿತಿ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್‌ ಟಿವಿ ವಿತರಿಸಲಾಯಿತು.

   

ಯಲಹಂಕ: ಗ್ರಾಮಸಭೆಗಳಿಗೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಗೈರಾಗಿ, ಕಿರಿಯ ಹಾಗೂ ಸಹಾಯಕ ಅಧಿಕಾರಿಗಳನ್ನು ಕಳುಹಿಸುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ದೊರೆಯಲು ಸಾಧ್ಯವಾಗುವುದಿಲ್ಲ ಎಂದು ಮಾರೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ರಾಹುಲ್‌ ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಟರಾಯನಪುರ ಕ್ಷೇತ್ರದ ಮಾರೇನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಸಭೆಗೆ ಅಧಿಕಾರಿಗಳು ಗೈರಾಗುವುದರಿಂದ ಸಾರ್ವಜನಿಕ ಸಮಸ್ಯೆಗಳ ಕುರಿತ ಚರ್ಚೆಗಳಿಗೆ ಅವಕಾಶವಿಲ್ಲದಂತಾಗುತ್ತದೆ. ಗೈರಾಗುವ ಅಧಿಕಾರಿಗಳ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು’ ಎಂದರು. 

ADVERTISEMENT

ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಪಡೆಯಬಹುದು. ಪಂಚಾಯಿತಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. 

ಫಲಾನುಭವಿಗಳಿಗೆ 94ಡಿ ಅಡಿ ಹಕ್ಕುಪತ್ರ, ಭಾಗ್ಯಲಕ್ಷ್ಮಿ ಬಾಂಡ್‌ ಆದೇಶ ಪತ್ರ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ಶಾಲೆಗಳಿಗೆ ರೌಂಡ್‌ ಟೇಬಲ್‌, ಕಪಾಟು, ಧ್ವನಿವರ್ಧಕ, ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್‌ ಟಿವಿ, ಕೇರಂ ಬೋರ್ಡ್‌ ವಿತರಿಸಲಾಯಿತು.

ಪಂಚಾಯಿತಿ ವತಿಯಿಂದ ವಿವಿಧೋದ್ದೇಶಗಳಿಗಾಗಿ ನೂತನವಾಗಿ ನಿರ್ಮಿಸಿರುವ ಸಭಾಂಗಣವನ್ನು ಉದ್ಘಾಟಿಸಲಾಯಿತು.

ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ, ಮಾಜಿ ಅಧ್ಯಕ್ಷರಾದ ವಿ.ನಂಜೇಗೌಡ, ಪ್ರೇಮಾ, ಸದಸ್ಯರಾದ ನಾರಾಯಣಸ್ವಾಮಿ, ಕೃಷ್ಣಪ್ಪ, ಗೀತಾ ಆನಂದಕುಮಾರ್‌, ಮುಖಂಡ ಮರಳುಕುಂಟೆ ಎಂ.ಸುರೇಶ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.