ಯಲಹಂಕ: ಗ್ರಾಮೀಣ ಆಟಗಳು, ನೃತ್ಯ, ಚಿತ್ತಾರದ ರಂಗೋಲಿಗಳು, ಚಿತ್ರಕಲೆ, ಕ್ರೀಡಾ ಸ್ಪರ್ಧೆಗಳು, ರಕ್ತದಾನ-ಆರೋಗ್ಯ ಶಿಬಿರ, ಎತ್ತುಗಳ ಪ್ರದರ್ಶನ, ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ತೇಲಿಬರುತ್ತಿದ್ದ ಸಂಗೀತದ ಬೀಟ್ಸ್‌ಗಳಿಗೆ ಕುಣಿದು ಕುಪ್ಪಳಿಸಿದ ಯುವಜನತೆ...
ಕೆಬಿಜಿ ಸ್ವಯಂಸೇವಕರು ಹಾಗೂ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಹಯೋಗದಲ್ಲಿ ಹುಣಸಮಾರನಹಳ್ಳಿಯ ಎಸ್.ಜೆ.ಪಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ʼಜಾಲ ಹಬ್ಬʼದಲ್ಲಿ ಕಂಡುಬಂದ ದೃಶ್ಯಗಳಿವು.
ವಾಲಿಬಾಲ್, ಕಬಡ್ಡಿ, ಹಗ್ಗ-ಜಗ್ಗಾಟ, ಲೆಮೆನ್ ಅಂಡ್ ಸ್ಪೂನ್ ಮತ್ತಿತರ ಕ್ರೀಡಾಸ್ಪರ್ಧೆಗಳು, ಮಹಿಳೆಯರಿಗಾಗಿ ರಂಗೋಲಿ ಹಾಗೂ ಮಕ್ಕಳಿಗಾಗಿ ಚಿತ್ರ ಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪೋಷಕರು ಮಕ್ಕಳೊಂದಿಗೆ ಗ್ರಾಮೀಣ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ವೈದ್ಯರು ರಕ್ತದೊತ್ತಡ, ಮಧುಮೇಹ ಸೇರಿ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ತಪಾಸಣೆ ನಡೆಸಿದರು. ರಕ್ತದಾನ ಶಿಬಿರದಲ್ಲಿ ಹಲವುಮಂದಿ ರಕ್ತದಾನ ಮಾಡಿದರು.
ʼನಮ್ಮೂರ ಹೆಮ್ಮೆʼ ಕಾರ್ಯಕ್ರಮದಡಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿದ 500 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ತಂಡದಿಂದ ಆಯೋಜಿಸಿದ್ದ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ವಸ್ತುಪ್ರದರ್ಶನದಲ್ಲಿ 50ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.
ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತೆ ಮೀನಾಕ್ಷಿ ಶೇಷಾದ್ರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಅಶೋಕನ್, ಸದಸ್ಯ ದಾನೇಗೌಡ, ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ. ಜಯಗೋಪಾಲಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.