ಯಲಹಂಕ: ಬಿಬಿಎಂಪಿ ವಾರ್ಡ್ ಸಂಖ್ಯೆ 3 ಮತ್ತು 4ರ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ₹ 13.50 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಶಾಸಕ ಎಸ್.ಆರ್.ವಿಶ್ವನಾಥ್ ಲೋಕಾರ್ಪಣೆಗೊಳಿಸಿದರು.
ಉಪನಗರ 4ನೇ ಹಂತದಲ್ಲಿ ಜಿಮ್ನಾಸ್ಟಿಕ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು. ಅಂಬೇಡ್ಕರ್ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶಾಲಾಕಟ್ಟಡ ಮತ್ತು ಸಮುದಾಯಭವನ, ಅಳ್ಳಾಳಸಂದ್ರದಲ್ಲಿ ಸಮುದಾಯ ಭವನ ಹಾಗೂ ನ್ಯಾಯಾಂಗ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಿತ್ತೂರುರಾಣಿ ಚನ್ನಮ್ಮ ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಇದೇ ವೇಳೆ ಅಂಬೇಡ್ಕರ್ ನಗರದಲ್ಲಿ ಸ್ಥಳೀಯ ನಿವಾಸಿಗಳು, ಮನೆಗಳು ಶಿಥಿಲಗೊಂಡಿದ್ದು ಬಿದ್ದುಹೋಗುವ ಸ್ಥಿತಿಯಲ್ಲಿವೆ. ಚರಂಡಿ ವ್ಯವಸ್ಥೆಯೂ ಸರಿಯಿಲ್ಲದೆ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸಬೇಕಾಗಿದೆ. ಕೂಡಲೇ ಹಳೆಯ ಮನೆಗಳನ್ನು ತೆರವುಗೊಳಿಸಿ, ನೂತನವಾಗಿ ಮನೆ ನಿರ್ಮಿಸಿಕೊಡಬೇಕು ಎಂದು ಶಾಸಕ ವಿಶ್ವನಾಥ್ ಅವರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅವರು, ಅಂಬೇಡ್ಕರ್ ನಗರದಲ್ಲಿ ಈ ಹಿಂದೆ 1+3 ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿತ್ತು. ನಂತರ ಯೋಜನೆಯನ್ನು ಮಾರ್ಪಡಿಸಿ, ಪ್ರತಿಯೊಬ್ಬರಿಗೂ ಪ್ರತ್ಯೇಕ ಮನೆಗಳನ್ನು ನಿರ್ಮಿಸುವ ಸಲುವಾಗಿ ಪಟ್ಟಿ ತಯಾರಿಸಿ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರಕ್ಕೆ ಮತ್ತೆ ಮನವಿ ಮಾಡಿ, ಆದಷ್ಟು ಶೀಘ್ರದಲ್ಲೇ ಸುಸಜ್ಜಿತ ವಾದ ಮನೆಗಳನ್ನು ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಸುಧಾಕರರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾಮ ಸಂಜೀವಯ್ಯ, ರಘುನಂದನ್ ಮಂತ್ರಿ, ಬಿಜೆಪಿ ಮುಖಂಡರಾದ ಪವನ್‌ಕುಮಾರ್.ವಿ, ರಾಜಣ್ಣ, ಮಧುಸೂದನ್, ಕಿರಣ್, ಅಕ್ಷತ್, ರಮೇಶ್, ಎಸ್.ಸೋಮಶೇಖರ್, ಮುರಳಿ, ಕೆಂಪಣ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.