ಬೆಂಗಳೂರು: ನಗರದ ಎರಡನೇ ಪ್ರಮುಖ ರೈಲು ನಿಲ್ದಾಣವಾಗಿರುವ ಯಶವಂತಪುರ ನಿಲ್ದಾಣವು ಹೊಸರೂಪ ಪಡೆಯುತ್ತಿದ್ದು ನವೀಕರಣ ಮತ್ತು ಉನ್ನತೀಕರಣ ಕಾಮಗಾರಿ ಪೂರ್ಣಗೊಂಡ ಬಳಿಕ ಮುಂದಿನ ವರ್ಷ ಲೋಕಾರ್ಪಣೆಗೊಳ್ಳಲಿದೆ.
ನಿಲ್ದಾಣದ ಎರಡೂ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು ಶೇ 56ರಷ್ಟು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳಿಸುವ ಗುರಿಯನ್ನು ನೈರುತ್ಯ ರೈಲ್ವೆ ಇಟ್ಟುಕೊಂಡಿದೆ. ಇದರ ಯೋಜನಾ ವೆಚ್ಚ ₹378 ಕೋಟಿ.
ನಿಲ್ದಾಣದ ಪೂರ್ವಭಾಗದಲ್ಲಿ(ಯಶವಂತಪುರ ಮಾರುಕಟ್ಟೆ ಕಡೆಯಿಂದ) ಬಹುಮಹಡಿ ಕಾರು ಪಾರ್ಕಿಂಗ್, ದ್ವಿಚಕ್ರ ವಾಹನ ನಿಲುಗಡೆ, ರೈಲ್ವೆ ಕಚೇರಿಗಳು, ವಾಣಿಜ್ಯ ಸ್ಥಳ, ಟಿಕೆಟ್ ಕೌಂಟರ್‌ಗಳು, ವಿಐಪಿ ಲಾಂಜ್, ನಿರೀಕ್ಷಣಾ ಕೊಠಡಿಗಳು ಇತ್ಯಾದಿಗಳನ್ನು ಹೊಂದಿರುವ ನೆಲಮಹಡಿ ಮತ್ತು ಐದು ಮಹಡಿಯ ಕಟ್ಟಡ, ಎತ್ತರದ ರಸ್ತೆ-ಕಮ್-ಆಗಮನ, ನಿರ್ಗಮನ ಪ್ಲಾಜಾಗಳು ನಿರ್ಮಾಣಗೊಳ್ಳುತ್ತಿವೆ.
ಪಶ್ಚಿಮ ಭಾಗದಲ್ಲಿ (ಬೆಂಗಳೂರು–ತುಮಕೂರು ರಸ್ತೆಯ ಕಡೆಯಿಂದ), ಎತ್ತರದ ರಸ್ತೆ, ನಿರ್ಗಮನ ಪ್ಲಾಜಾ, ಪಾರ್ಕಿಂಗ್ ಪ್ರದೇಶ, ಪಾರ್ಕಿಂಗ್ ಸೌಲಭ್ಯ, ಪ್ರವೇಶ ಮತ್ತು ನಿರ್ಗಮನಕ್ಕಾಗಿ ಪ್ರತ್ಯೇಕ ಮಾರ್ಗದ ರಸ್ತೆ, ಟಿಕೆಟ್ ಕೌಂಟರ್‌ಗಳು, ವಾಣಿಜ್ಯ ಸ್ಥಳ, ಡಾರ್ಮಿಟರಿಗಳು, ವಿಶ್ರಾಂತಿ ಕೊಠಡಿಗಳು, ನಿರೀಕ್ಷಣಾ ಕೊಠಡಿಗಳು , ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ನಿಲ್ದಾಣದ ಕಟ್ಟಡದ ಕಾಮಗಾರಿ ನಡೆಯುತ್ತಿದೆ.
ಈ ನಿಲ್ದಾಣವು ಬೃಹತ್ ಗಾತ್ರದ ಏರ್ ಕಾನ್ಕೋರ್ಸ್ (14,800 ಚದರ ಮೀಟರ್) ಹೊಂದಿದೆ. ಆಹಾರ ಮಳಿಗೆಗಳು, ವಾಣಿಜ್ಯ ಮಳಿಗೆಯ ಸ್ಥಳ, ವ್ಯಾಪಾರ ಕೇಂದ್ರಗಳು ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ. ವಿಮಾನ ನಿಲ್ದಾಣಗಳಲ್ಲಿರುವ ಲಾಂಜ್‌ಗೆ ಸರಿ ಸಮನಾಗಿರುವಂತಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಮಳೆನೀರು ಸಂಗ್ರಹ, ಒಳಚರಂಡಿ ನೀರು ಸಂಸ್ಕರಣಾ ಘಟಕಗಳೊಂದಿಗೆ ಹಸಿರು ಕಟ್ಟಡ ಮಾನದಂಡಗಳ ಪ್ರಕಾರ ಈ ನಿಲ್ದಾಣ ನಿರ್ಮಿಸಲಾಗುತ್ತಿದೆ. ಇಂಧನ ದಕ್ಷತೆಯ ದೃಷ್ಟಿಯಿಂದ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಟ್‌ಫಾರ್ಮ್–1ರ ಕಡೆಯಿಂದ (ಪೂರ್ವಭಾಗ) ನಡೆಯುತ್ತಿರುವ ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಪ್ರಯಾಣಿಕರ ದಟ್ಟಣೆ ತಡೆಗೆ ನಿಲ್ದಾಣದ ಆಗಮನ– ನಿರ್ಗಮನ ದ್ವಾರಗಳನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಿರುವುದರಿಂದ ವಾಹನ ಸಂಚಾರಕ್ಕೆ ಅನುಕೂಲವಾಗಲಿದೆ. ನಮ್ಮ ಮೆಟ್ರೊದ ಯಶವಂತಪುರ ನಿಲ್ದಾಣ ಕಡೆಯಿಂದ (ಪಶ್ಚಿಮ ಭಾಗ) ಕಾಮಗಾರಿಗಳು ನಡೆಯುತ್ತಿದ್ದು, ಇನ್ನು ಆರು ತಿಂಗಳಲ್ಲಿ ಅಂತಿಮ ಹಂತಕ್ಕೆ ತಲುಪಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರವೇಶ, ನಿರ್ಗಮನ ಪ್ರದೇಶ ಮತ್ತು ಎಲ್ಲ ಪ್ಲ್ಯಾಟ್‌ಫಾರ್ಮ್‌ಗಳಿಗೆ ಲಿಫ್ಟ್‌ಗಳು ಮತ್ತು ಎಸ್ಕಲೇಟರ್‌ಗಳು ಇರಲಿವೆ. ಪ್ರಯಾಣಿಕರ ಸೌಕರ್ಯ, ಅನುಕೂಲ, ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಆರಾಮವಾಗಿ ಕಾಯುವ ಪ್ರದೇಶ, ಮಲ್ಟಿ-ಲೆವೆಲ್ ಪಾರ್ಕಿಂಗ್, ಮಕ್ಕಳಿಗಾಗಿ ಆಟದ ವಲಯ, ಸ್ಥಳೀಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಸ್ಥಳಾವಕಾಶ ಇರಲಿದೆ.
2022ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಮಗಾರಿಗೆ ಚಾಲನೆ ನೀಡಿದ್ದರು. ದೆಹಲಿಯ ಗಿರ್ಧಾರಿ ಲಾಲ್ ಕನ್‌ಸ್ಟ್ರಕ್ಷನ್ಸ್ ಕಂಪನಿ ಕಾಮಗಾರಿ ಕೈಗೆತ್ತಿಕೊಂಡಿದೆ.
ವಿಶ್ವದರ್ಜೆಯ ನಿಲ್ದಾಣ: ಸೋಮಣ್ಣ
ನಗರದ ಎಲ್ಲ ಪ್ರಮುಖ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ನಂತರ ಪ್ರಮುಖ ನಿಲ್ದಾಣವಾಗಿರುವ ಯಶವಂತಪುರ ವಿಶ್ವದರ್ಜೆಯ ನಿಲ್ದಾಣವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು. ಕಾಮಗಾರಿಗಳನ್ನು ವೇಗವಾಗಿ ಮಾಡಬೇಕಿದ್ದರೆ ಯಶವಂತಪುರಕ್ಕೆ ಬರುವ ರೈಲುಗಳನ್ನು ಬೇರೆ ಮಾರ್ಗಕ್ಕೆ ತಿರುಗಿಸಬೇಕಿತ್ತು. ಆದರೆ ಪ್ರಯಾಣಿಕರಿಗೆ ಅನನುಕೂಲ ಆಗಬಾರದು ಎಂಬ ಕಾರಣಕ್ಕೆ ಹೆಚ್ಚಿನ ರೈಲುಗಳನ್ನು ತಿರುಗಿಸದೇ ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನ ವರ್ಷ ರೈಲ್ವೆ ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ನಿಲ್ದಾಣದ ಮಾಹಿತಿ
ಯಶವಂತಪುರ ನಿಲ್ದಾಣವು ಬೆಂಗಳೂರು-ಪುಣೆ ಮತ್ತು ಬೆಂಗಳೂರು-ಹೈದರಾಬಾದ್ ಮುಖ್ಯ ಮಾರ್ಗದಲ್ಲಿದೆ. ದೆಹಲಿ ಮುಂಬೈ ಪುಣೆ ಇಂದೋರ್ ಭುವನೇಶ್ವರ ಭೋಪಾಲ್ ಗ್ವಾಲಿಯರ್ ಜಬಲ್ಪುರ ಅಜ್ಮೇರ್ ಜೈಪುರ ಅಯೋಧ್ಯೆ ಗೋರಖ್‌ಪುರ ಲಖನೌ ಚಂಡೀಗಢ ಹೌರಾ ಚೆನ್ನೈ ತಿರುವನಂತಪುರ ಮಂಗಳೂರು ಕಣ್ಣೂರು ಕೋಯಿಕ್ಕೋಡ್ ತುಮಕೂರು ಅಹಮದಾಬಾದ್ ಪುದುಚೇರಿ ಮುಂತಾದ ಪ್ರಮುಖ ನಗರಗಳಿಗೆ ಯಶವಂತಪುರದಿಂದ ರೈಲುಗಳು ಹೊರಡುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.