
ಯೋಗಾಸಕ್ಕೆ ಕ್ರೀಡಾ ರತ್ನ: ಸಂಭ್ರಮ ಹೆಚ್ಚಿಸಿದೆ; ಯೋಗ ಗುರು ಭವರಲಾಲ್ ಆರ್ಯ
ಬೆಂಗಳೂರು: ಇದೇ ಮೊತ್ತ ಮೊದಲ ಬಾರಿಗೆ ಯೋಗಾಸನ ಕ್ರೀಡೆಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಿದ್ದು ನಮ್ಮೆಲ್ಲಾ ಯೋಗ ಪಟುಗಳಿಗೆ ಸಂತೋಷಕರ ಮತ್ತು ಹೆಮ್ಮೆಯ ವಿಷಯವಾಗಿದೆ ಎಂದು ಯೋಗಾಸನ ಭಾರತದ ರಾಷ್ಟ್ರೀಯ ನಿರ್ದೇಶಕ ಮತ್ತು ಕರ್ನಾಟಕ ಪತಂಜಲಿ ಯೋಗ ಪೀಠದ ಪ್ರಭಾರಿ ಅಂತರರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಹೇಳಿದರು.
ಮೊಟ್ಟಮೊದಲ ಬಾರಿಗೆ ಈ ಪ್ರಶಸ್ತಿ ನೀಡಿದ್ದು ಕರ್ನಾಟಕದ ಎಲ್ಲಾ ಯೋಗ ಸಾಧಕರಿಗೆ, ಯೋಗಾಸಕ್ತರಿಗೆ, ಯೋಗಿಗಳಿಗೆ, ಯೋಗಪಟುಗಳಿಗೆ ತುಂಬಾ ಸಂತೋಷವನ್ನು ಉಂಟುಮಾಡಿದೆ ಎಂದರು.
2022ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ನಮ್ಮ ಯೋಗಾಸನ ಕರ್ನಾಟಕ ಸಂಸ್ಥೆಯ ಕ್ರೀಡಾಪಟುಗಳಾದ ಮೊಹಮ್ಮದ್ ಫಿರೋಜ್ ಶೇಖ್ (ಬೆಂಗಳೂರು) ಹಾಗೂ 2023ನೇ ಸಾಲಿನ ಕರ್ನಾಟಕದ ಕ್ರೀಡಾ ರತ್ನ ಪ್ರಶಸ್ತಿಯನ್ನು ವಿನಾಯಕ ಎಂ ಕೊಂಗಿ (ಹುಬ್ಬಳ್ಳಿ) ಅವರಿಗೆ ನೀಡಿದ್ದು ಸಂತೋಷವಾಗಿದೆ ಎಂದರು.
ಈ ಪ್ರಶಸ್ತಿ ರಾಜ್ಯದ ಎಲ್ಲಾ ಯೋಗಪಟುಗಳಿಗೆ ಪ್ರೇರಣೆ ಆಗುತ್ತದೆ. ಮುಂದಿನ ವರ್ಷಗಳಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ಒಲಂಪಿಕ್ಸ್‌ನಲ್ಲಿ ನಮ್ಮ ಯೋಗ ಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪದಕ ಗೆದ್ದು, ನಮ್ಮ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಕೀರ್ತಿ ತರುವ ಪ್ರಯತ್ನವನ್ನು ನಮ್ಮ ಯೋಗ ಪಟುಗಳು ಮಾಡುತ್ತಾರೆ ಎಂಬ ಆಶಾ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಪೋಷಕರು ಮಕ್ಕಳನ್ನು ಬೇರೆ ಕ್ರೀಡೆಗಳಿಗೆ ಭಾಗವಹಿಸಲು ಪ್ರೋತ್ಸಾಹಿಸಿದಂತೆ ಯೋಗಾಸನ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು, ಜೊತೆಗೆ ಜಿಲ್ಲಾ ಮಟ್ಟದಲ್ಲಿ ಯೋಗಾಸನ ಕ್ರೀಡಾ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಿದ್ದೇವೆ. ಈ ಎಲ್ಲಾ ಕಾರ್ಯಗಳಿಗೆ ಪೋಷಕರು, ದಾನಿಗಳು, ಯೋಗಾಸಕ್ತರು ಸಹಕರಿಸಬೇಕೆಂದು ವಿನಂತಿಸಿದರು.
ಯೋಗಾಸನ ಭಾರತದ ಕೇಂದ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಜಯದೀಪ್ ಆರ್ಯ ಅವರು ಮೊಹಮ್ಮದ್ ಫಿರೋಜ್ ಶೇಖ್ ಮತ್ತು ವಿನಾಯಕ ಕೊಂಗಿ ಅವರನ್ನು ಅಭಿನಂದಿಸಿದರು. ಈ ಸಂಧರ್ಭದಲ್ಲಿ ಯೋಗಾಸನ ಕರ್ನಾಟಕದ ಕಾರ್ಯದರ್ಶಿ ಪವಿತ್ರಾ, ನಿರ್ದೇಶಕರಾದ ಪರಶುರಾಮಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.