ಯಲಹಂಕ: ‘ಬಹುರಾಷ್ಟ್ರಗಳಲ್ಲಿ ಮನುಕುಲದ ಒಳಿತಿಗಾಗಿ ಯೋಗ ಅಳವಡಿಸಿಕೊಂಡಿದ್ದರೂ, ನಮ್ಮ ದೇಶದಲ್ಲಿ ಯೋಗವಿದ್ಯೆಯನ್ನು ಮಕ್ಕಳಿಗೆ ತಲುಪಿಸುವಲ್ಲಿ ಯಶಸ್ವಿಯಾಗದ್ದೇವೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಹೆಳಿದರು.
ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಕ್ಲಬ್, ಸ್ವಾಮಿ ವಿವೇಕಾನಂದ ಯೋಗ ರಿಸರ್ಚ್ ಅಂಡ್ ಹೋಲಿಸ್ಟಿಕ್ ಹೆಲ್ತ್ ಟ್ರಸ್ಟ್ ಹಾಗೂ ಅಮೆರಿಕದ ಯೋಗ ವಿಶ್ವವಿದ್ಯಾಲಯ, ಮಿಯಾಮಿ, ಫ್ಲಾರಿಡಾದ ಸಹಯೋಗದಲ್ಲಿ ಜಿಕೆವಿಕೆಯಲ್ಲಿ ಆಯೋಜಿಸಿರುವ ಮೂರನೇ ಜಾಗತಿಕ ಯೋಗ ಶೃಂಗಸಭೆ- 2024 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಭೂ ಮಂಡಲದಲ್ಲಿ ಭಗವಂತನು ನಮಗಾಗಿ ಸೃಷ್ಟಿಮಾಡಿರುವ ಗಾಳಿ, ನೀರು ಅಶುದ್ಧವಾಗಿದ್ದು, ತಿನ್ನುವ ಆಹಾರ ವಿಷವಾಗಿದೆ. ಇಂತಹ ಕಾಲಘಟ್ಟದಲ್ಲಿ ನಾವು ಬದುಕಲು ಇರುವ ಏಕೈಕ ಮಾರ್ಗ ಯೋಗವಿದ್ಯೆ ಮಾತ್ರ’ ಎಂದರು.
ಯೋಗ ಶೃಂಗಸಭೆಯ ಅಧ್ಯಕ್ಷ ಯೋಗಿ ದೇವರಾಜ ಗುರೂಜಿ ಮಾತನಾಡಿ, ‘ಈ ಶೃಂಗಸಭೆಯು ಯೋಗಾಭ್ಯಾಸಿಗಳು, ಸಂಶೋಧಕರು ಹಾಗೂ ವೃತ್ತಿಪರರು ಒಗ್ಗೂಡಲು ಮತ್ತು ಆವಿಷ್ಕಾರ ಕೈಗೊಳ್ಳಲು ಕ್ರಿಯಾತ್ಮಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ತಿಳಿಸಿದರು.
ತ್ರಿಯೋಗ ಸಂಸ್ಥಾಪಕಿ ಯೋಗಿನಿ ಕಾಳಿ ಅವರ ನೇತೃತ್ವದಲ್ಲಿ ನಡೆದ ಅಂತರರಾಷ್ಟ್ರೀಯ ಪೂರ್ಣ ಅಧಿವೇಶನದಲ್ಲಿ ಫ್ರಾನ್ಸ್, ಇಂಗ್ಲೆಂಡ್, ಬಹ್ರೇ ನ್, ಆಸ್ಟ್ರೇಲಿಯಾ, ಡೆನ್ಮಾರ್ಕ್, ಬೆಲ್ಜಿಯಂ, ಹಾಂಗ್ ಕಾಂಗ್, ರಷ್ಯಾ, ಮಲೇಷ್ಯಾ, ಇಂಡೋನೇಷ್ಯಾ, ನೇಪಾಳ ಮತ್ತಿತರ ದೇಶಗಳ ಯೋಗ ಸಂಶೋಧಕರು ಮತ್ತು ವಿದ್ವಾಂಸರು ಪಾಲ್ಗೊಂಡಿದ್ದರು.
ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ, ಆದಿಚುಂಚನಗಿರಿಯ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಅವಧೂತ ವಿನಯ್ ಗುರೂಜಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.