ADVERTISEMENT

ಕುಟುಂಬ ಯೋಜನೆ ಬೇಕೋ, ಮಕ್ಕಳು ಬೇಕೋ?

‘ಮಕ್ಕಳಿಂದ ಮಮ್ಮಿ–ಡ್ಯಾಡಿ ಅಂತ ಕರಿಸಿಕೊಳ್ಳೋಕೆ ಹಳ್ಳಿಗರಿಗೆ ಆಸೆ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 13:05 IST
Last Updated 3 ಜುಲೈ 2018, 13:05 IST

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವ ವಿದ್ಯಮಾನದ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ಸ್ವಾರಸ್ಯಕರ ಚರ್ಚೆ ನಡೆಯಿತು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಚೆನ್ನಾಗಿ ನಡೆಯುತ್ತಿವೆ. ಉಳಿದೆಡೆ ಖಾಸಗಿ ಶಾಲೆಗಳೇ ಹೆಚ್ಚಾಗಿವೆ. ಈಗಿನ ದಂಪತಿಗಳಿಗೆ ಒಂದೊಂದೇ ಮಗು ಇರುವ ಕಾರಣ ಗ್ರಾಮಾಂತರ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್‌ ಹೇಳಿದರು.

‘ಇದೊಳ್ಳೆ ಕತೆ ಆಯ್ತಲ್ಲ. ಒಂದೆಡೆ ಜನಸಂಖ್ಯೆ ನಿಯಂತ್ರಣಕ್ಕೆ ಕುಟುಂಬ ಯೋಜನೆ ಬೇಕು ಎನ್ನುತ್ತೀರಿ. ಇನ್ನೊಂದೆಡೆ ದಂಪತಿಗಳಿಗೆ ಮಕ್ಕಳೇ ಇಲ್ಲ ಎನ್ನುತ್ತೀರಿ. ನಿಮಗೆ ಯಾವುದು ಬೇಕು’ ಎಂದು ವಿಧಾನಸಭಾಧ್ಯಕ್ಷ ರಮೇಶಕುಮಾರ್‌ ಪ್ರತಿಕ್ರಿಯಿಸಿದರು. ಆಗ ಸದನ ನಗೆಗಡಲಲ್ಲಿ ತೇಲಿತು.

ADVERTISEMENT

ಜೆಡಿಎಸ್‌ನ ಶಿವಲಿಂಗೇಗೌಡ, ‘ನಮ್ಮ ಹಳ್ಳಿ ಜನರಿಗೆ ಇಂಗ್ಲಿಷ್‌ ವ್ಯಾಮೋಹ. ತಮ್ಮ ಮಕ್ಕಳಿಂದ ಮಮ್ಮಿ–ಡ್ಯಾಡಿ ಅಂತ ಕರಿಸಿಕೊಳ್ಳೋಕೆ ಅವರಿಗೆ ಆಸೆ’ ಎಂದು ಹೇಳಿದರು. ‘ಇಂಗ್ಲಿಷ್‌ ಬರದ ಮೇಷ್ಟ್ರು ಏನು ಕಲಿಸಬಲ್ಲರು ಅಂತ ಅವರೆಲ್ಲ ತಮ್ಮ ಮಕ್ಕಳನ್ನು ಕಾನ್ವೆಂಟ್‌ ಶಾಲೆಗಳಿಗೆ ಕಳಿಸುತ್ತಾರೆ’ ಎಂದು ಹೇಳಿದರು.

‘ಎಷ್ಟು ಅಧಿಕಾರಿಗಳು ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ’ ಎಂದು ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಏರುಧ್ವನಿಯಲ್ಲಿ ಕೇಳಿದರೆ, ‘ಮೊದಲು ನಮ್ಮ ಮಕ್ಕಳು ಎಲ್ಲಿ ಓದುತ್ತಿದ್ದಾರೆ ಹೇಳಿ’ ಎಂದು ಸಭಾಧ್ಯಕ್ಷರು ಮರುಪ್ರಶ್ನೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.