ಬೆಂಗಳೂರು: ಯುವಕನಿಗೆ ಮದ್ಯ ಕುಡಿಸಿ ಆತನ ಸ್ನೇಹಿತರೇ ಮತ್ತೊಂದು ಗ್ಯಾಂಗ್ನ ಮೂಲಕ ದರೋಡೆ ಮಾಡಿಸಿರುವ ಘಟನೆ ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಾಸಗಿ ಕಂಪನಿಯ ಉದ್ಯೋಗಿ ಚಂದನ್ ಅವರ ಚಿನ್ನದ ಸರ, ಕೈಕಡಗ ಸೇರಿ ₹ 3 ಲಕ್ಷ ಮೌಲ್ಯದ ಆಭರಣ ದರೋಡೆ ಮಾಡಲಾಗಿದೆ. ಚಂದನ್ ದೂರಿನ ಮೇರೆಗೆ ಅವರ ಸ್ನೇಹಿತರಾದ ಪವನ್, ಅಚಲ್ ನಾನಾ ಹಾಗೂ ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ವೇಳೆ ಚಂದನ್ ಸ್ನೇಹಿತರೇ ದರೋಡೆಗೆ ಸಂಚು ರೂಪಿಸಿದ್ದರು ಎಂಬುದು ಗೊತ್ತಾಗಿದೆ.
‘ಕಳೆದ ತಿಂಗಳು ಚಿಕ್ಕಜಾಲದ ಪಬ್ವೊಂದಕ್ಕೆ ಸ್ನೇಹಿತರಾದ ಚಂದನ್, ಪವನ್ ಮತ್ತು ಅಚಲ್ ತೆರಳಿದ್ದರು. ಈ ವೇಳೆ ಚಂದನ್ಗೆ ಕಂಠಪೂರ್ತಿ ಮದ್ಯ ಕುಡಿಸಿದ್ದ ಆರೋಪಿಗಳು, ನಂತರ ಆತನ ಕಾರಿನಲ್ಲಿ ಕರೆದೊಯ್ದಿದ್ದರು. ಮಾರ್ಗಮಧ್ಯೆ ಅಚಲ್, ಪ್ರೇಮ್ ಶೆಟ್ಟಿ ಹಾಗೂ ಆತನ ಗ್ಯಾಂಗ್ಗೆ ಫೋನ್ ಮಾಡಿ ಕರೆಸಿಕೊಂಡಿದ್ದ. ಸ್ಥಳಕ್ಕೆ ಬಂದಿದ್ದ ಪ್ರೇಮ್ ಶೆಟ್ಟಿ ತಂಡ ಮದ್ಯದ ಅಮಲಿನಲ್ಲಿದ್ದ ಚಂದನ್ ಮೇಲೆ ಹಲ್ಲೆ ನಡೆಸಿ, ಅವರ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
ಅಚಲ್‌ನ ಫೋನ್ ಕರೆಯ ವಿವರಗಳನ್ನು ಪರಿಶೀಲಿಸಿದಾಗ, ಆತ ಪ್ರೇಮ್ ಶೆಟ್ಟಿ ಎಂಬಾತನಿಗೆ ಕರೆ ಮಾಡಿರುವುದು ಗೊತ್ತಾಯಿತು. ಪೊಲೀಸರಿಗೆ ಅನುಮಾನ ಬರುತ್ತಿದ್ದಂತೆ ಪವನ್ ಮತ್ತು ಅಚಲ್ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಶೋಧ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಶ್ರೀಮಂತ ಕುಟುಂಬದ ಚಂದನ್, ಮೈ ತುಂಬಾ ಚಿನ್ನಾಭರಣ ಧರಿಸುತ್ತಿದ್ದ. ಆರೋಪಿಗಳ ಪೈಕಿ ಅಚಲ್, ಜೆ. ಪಿ ನಗರದಲ್ಲಿ ನಡೆಸುತ್ತಿದ್ದ ಕೆಫೆ ನಷ್ಟಕ್ಕೀಡಾಗಿತ್ತು. ಆದ್ದರಿಂದ ಈ ಕೃತ್ಯ ಎಸಗಿರಬಹುದು’ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.